ADVERTISEMENT

ಕೋಮುಲ್‌: ನಂಜೇಗೌಡಗೆ ಹ್ಯಾಟ್ರಿಕ್‌ ಪಟ್ಟಾಭಿಷೇಕ!

ಕೋಮುಲ್‌ ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕನ ಅವಿರೋಧ ಆಯ್ಕೆ; ಹಲವು ಪ್ರಹಸನ ನಂತರ ಸದ್ಯಕ್ಕೆ ಸುಖಾಂತ್ಯ

ಕೆ.ಓಂಕಾರ ಮೂರ್ತಿ
Published 6 ಜುಲೈ 2025, 6:50 IST
Last Updated 6 ಜುಲೈ 2025, 6:50 IST
   

ಕೋಲಾರ: ಹಲವು ಪ್ರಹಸನಗಳ ನಡುವೆ ಪಟ್ಟು ಬಿಡದೆ ಹಟ ಸಾಧಿಸಿದ ಮಾಲೂರು ಶಾಸಕ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಯಶ ಕಂಡಿದ್ದಾರೆ.

ಈ ಮೂಲಕ ಸತತ ಮೂರನೇ ಭಾರಿ ಅವರು ಪಟ್ಟ ಅಲಂಕರಿಸಿದಂತಾಗಿದೆ. ಅಲ್ಲದೇ, ಕೋಮುಲ್‌ನ ಮೊದಲ ಅಧ್ಯಕ್ಷ ಎಂಬ ಶ್ರೇಯಕ್ಕೂ ಅವರು ಭಾಜನರಾದರು. ಕಳೆದ ಡಿಸೆಂಬರ್‌ನಷ್ಟೇ ಕೋಚಿಮುಲ್‌ ವಿಭಜನೆಯಾಗಿ ಕೋಮುಲ್‌ ಆಗಿತ್ತು.

ಕೋಮುಲ್‌ ಮುಖ್ಯ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಿಗದಿಯಾಗಿದ್ದ ಚುನಾವಣೆಗೆ ನಂಜೇಗೌಡ ನಾಮಪತ್ರ ಸಲ್ಲಿಸಿದ್ದರು. ಎದುರಾಳಿಯಾಗಿ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಒಕ್ಕೂಟದ ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಅವಿರೋಧ ಆಯ್ಕೆ ಘೋಷಿಸಿದರು.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಂಜೇಗೌಡ ಪರವಾಗಿ ಸೂಚಕರಾಗಿ ಜಯಸಿಂಹ ಕೃಷ್ಣಪ್ಪ, ಅನುಮೋದಕರಾಗಿ ಹನುಮೇಶ್ ಸಹಿ ಹಾಕಿದ್ದರು. ಅವರ ಬೆಂಬಲಿತ ಇನ್ನುಳಿದ ನಿರ್ದೇಶಕರಾದ ಚಂಜಿಮಲೆ ಬಿ.ರಮೇಶ್‌, ಕೆ.ಕೆ.ಮಂಜುನಾಥ್, ಕಾಂತಮ್ಮ ಸೋಮಣ್ಣ, ಶ್ರೀನಿವಾಸ್ ಹಾಗೂ ನಾಮನಿರ್ದೇಶಿತ ಸದಸ್ಯ ಯೂನಷ್‌ ಶರೀಫ್‌ ಕೂಡ ಜೊತೆಗಿದ್ದರು. ಮತ್ತೊಂದು ಕೊಠಡಿಯಲ್ಲಿ ಶಾಸಕರ ಕೊತ್ತೂರು ಮಂಜುನಾಥ್‌, ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಹಲವರು ಬೆಂಬಲಿಗರು ಬೆನ್ನೆಲುವಾಗಿ ನಿಂತಿದ್ದರು.

ಒಕ್ಕೂಟದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಕ್ಕೆ ಜೂನ್ 25ರಂದು ಚುನಾವಣೆ ನಡೆದಿತ್ತು. ಸರ್ಕಾರಿ ನಾಮನಿರ್ದೇಶಿತ ಸದಸ್ಯ, ಕೆಎಂಎಫ್, ಸಹಕಾರ ಇಲಾಖೆ ಉಪ ನಿಬಂಧಕ, ಪಶುಪಾಲನ ಇಲಾಖೆ ಉಪನಿರ್ದೇಶಕ ಹಾಗೂ ಎನ್‌ಡಿಡಿಬಿ ಸೇರಿ ಒಟ್ಟು 18 ನಿರ್ದೇಶಕರು ಇದ್ದಾರೆ.

13 ಚುನಾಯಿತ ನಿರ್ದೇಶಕರ ಪೈಕಿ 9 ಮಂದಿ ಕಾಂಗ್ರೆಸ್ ಹಾಗೂ ನಾಲ್ವರು ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆ ಆಗಿದ್ದಾರೆ. ನಂಜೇಗೌಡ ಮಾಲೂರು ತಾಲ್ಲೂಕಿನ ಟೇಕಲ್‌ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇತ್ತ ಬಂಗಾರಪೇಟೆ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾದ ಕಾಂಗ್ರೆಸ್‌ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದರು. ಹೀಗಾಗಿ, ಅಧ್ಯಕ್ಷ ಸ್ಥಾನದ ವಿಚಾರ ಕಾಂಗ್ರೆಸ್‌ ವರಿಷ್ಠರ ಬಳಿಕೆ ಹೋಗಿತ್ತು.

ನಾಮನಿರ್ದೇಶಿತ ಸದಸ್ಯ ಸೇರಿ ತಮ್ಮ ಬೆಂಬಲಿತ ಎಂಟು ನಿರ್ದೇಶಕರಿದ್ದು, ಅಧ್ಯಕ್ಷ ಸ್ಥಾನ ಬೇಕೆಂದು ನಂಜೇಗೌಡ ಪಟ್ಟು ಹಿಡಿದಿದ್ದರು. ಅವರಿಗೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌, ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬೆಂಬಲವಾಗಿ ನಿಂತಿದ್ದರು. ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ಬೆಂಬಲವೂ ಪರೋಕ್ಷವಾಗಿ ಇತ್ತು ಎಂಬುದು ಗೊತ್ತಾಗಿದೆ.

ಇತ್ತ ನಾರಾಯಣಸ್ವಾಮಿ ಕೂಡ ಈ ಬಾರಿ ಅಧ್ಯಕ್ಷನಾಗಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಂದ ಹಿಡಿದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಹಕ್ಕೊತ್ತಾಯ ಮಂಡಿಸಿದ್ದರು. ಜೊತೆಗೆ ಅವರು ಬೆಂಬಲಿಗರು ಕೂಡ ಈ ಬಾರಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯವರಿಗೆ ಕೊಡಬೇಕೆಂದು ಆಗ್ರಹಿಸಿದ್ದರು. ಅದಕ್ಕೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕಿ ರೂಪಕಲಾ ಶಶಿಧರ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ನ ಹಲವು ಪದಾಧಿಕಾರಿಗಳು ಬೆಂಬಲವಾಗಿ ನಿಂತಿದ್ದರು.

ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂಗಳ ತಲುಪಿತ್ತು. ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಧ್ಯಸ್ಥಿಕೆಯಲ್ಲಿ ಕೊನೆಗೂ ಸಂಧಾನ ಸೂತ್ರ ಏರ್ಪಟ್ಟಿತ್ತು. ಅದರಂತೆ ಹೆಚ್ಚು ನಿರ್ದೇಶಕರ ಬೆಂಬಲ ಹೊಂದಿರುವ ನಂಜೇಗೌಡರಿಗೆ ಮತ್ತೊಂದು ಬಾರಿ ಕೋಮುಲ್‌ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡುವುದು, ನಾರಾಯಣಸ್ವಾಮಿ ಅವರನ್ನು ಕೆಎಂಎಫ್‌ ಡೆಲಿಗೇಟ್‌ ಆಗಿ ನಿಯೋಜನೆ ಮಾಡುವುದು ಆ ಸೂತ್ರವಾಗಿತ್ತು. ಅದಕ್ಕೆ ನಾರಾಯಣಸ್ವಾಮಿ ಒಲ್ಲದ ಮನಸ್ಸಿನಿಂದಲೇ ತಲೆಯಾಡಿಸಿದ್ದರು ಎನ್ನಲಾಗಿದೆ. ಹೀಗಾಗಿ, ನಂಜೇಗೌಡರ ಅವಿರೋಧ ಆಯ್ಕೆ ಸುಗಮವಾಯಿತು.

ನಂಜೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗುತ್ತಿದ್ದಂತೆ ಮಾಲೂರು, ಕೋಲಾರದಿಂದ ಬಂದಿದ್ದ ಬೆಂಬಲಿಗರು ಒಕ್ಕೂಟದ ಮುಖ್ಯ ಕಚೇರಿಯ ರಸ್ತೆಯಲ್ಲಿ ಜಮಾಯಿಸಿದ್ದರು. ಅಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಣೆಯಾಗುವ ಮುಂಚೆಯೇ ಪಟಾಕಿ ಸಿಡಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ಅಧಿಕೃತ ಘೋಷಣೆ ಆದ ಕಚೇರಿಯ ಆವರಣಕ್ಕೆ ಬಂದು ಸೇಬು, ಕಿತ್ತಳೆ, ಮೊಸಂಬಿ ಹಣ್ಣುಗಳ ಬೃಹತ್ ಹಾರವನ್ನು ಕ್ರೇನ್‌ ಮೂಲಕ ನಂಜೇಗೌಡರಿಗೆ ಹಾಕಿ ಸಂಭ್ರಮಿಸಿದರು. ನಂತರ ಬೆಂಬಲಿಗರು ಹಾರ ಎಳೆದಾಡಿ ಹಣ್ಣುಗಳನ್ನು ಕಿತ್ತು ತಿಂದರು, ಆವರಣದಲ್ಲಿ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.