ADVERTISEMENT

ಕೊತ್ತೂರು ಬಣದ ಮೇಲುಗೈ: 23 ಗ್ರಾ.ಪಂ.ನಲ್ಲಿ ಮಾಜಿ ಶಾಸಕರ ಬೆಂಬಲಿಗರ ಹಿಡಿತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:17 IST
Last Updated 11 ಫೆಬ್ರುವರಿ 2021, 1:17 IST
ಮುಳಬಾಗಿಲು ನಗರ ಹೊರವಲಯದ ಸೊನ್ನವಾಡಿ ಗ್ರಾಮದಲ್ಲಿ ಕೊತ್ತೂರು ಮಂಜುನಾಥ್ ಅಭಿಮಾನಿಗಳ ಬಳಗದಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಲಾಯಿತು
ಮುಳಬಾಗಿಲು ನಗರ ಹೊರವಲಯದ ಸೊನ್ನವಾಡಿ ಗ್ರಾಮದಲ್ಲಿ ಕೊತ್ತೂರು ಮಂಜುನಾಥ್ ಅಭಿಮಾನಿಗಳ ಬಳಗದಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಲಾಯಿತು   

ಮುಳಬಾಗಿಲು: ‘ತಾಲ್ಲೂಕಿನ ಮೂವತ್ತು ಗ್ರಾಮ ಪಂಚಾಯಿತಿಗಳ ಪೈಕಿ ಇಪ್ಪತ್ಮೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಬೆಂಬಲಿಗರೇ ಆಗಿದ್ದಾರೆ’ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ನಗರ ಹೊರವಲಯದ ಸೊನ್ನವಾಡಿ ಗ್ರಾಮದಲ್ಲಿ ಬುಧವಾರ ಕೊತ್ತೂರು ಮಂಜುನಾಥ್ ಅಭಿಮಾನಿಗಳ ಬಳಗದಿಂದ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ತಮ್ಮ ಬಣದ ಸದಸ್ಯರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆ.ಸಿ ವ್ಯಾಲಿ ನೀರು ತರಲು ಈಗಿನ ಶಾಸಕ ಎಚ್. ನಾಗೇಶ್ ಕೈಯಲ್ಲಿ ಸಾಧ್ಯವಿಲ್ಲ. ತಮ್ಮ ಬೆಂಬಲಿಗರು ಮುಳಬಾಗಿಲಿನಿಂದ ಕೋಲಾರದ ಜಿಲ್ಲಾಧಿಕಾರಿ ಕಚೇರಿವರೆವಿಗೂ ಕಾಲ್ನಡಿಗೆ ಜಾಥಾ ಮಾಡಿ ಅದನ್ನು ಸಾಧಿಸಬೇಕು. ಹಿಂದೆ ತಾವು ಶಾಸಕರಾಗಿದ್ದ ಸಮಯದಲ್ಲಿ ತಾಲ್ಲೂಕಿನ ಎರಡು ಕೆರೆಗಳಿಗೆ ಮಾತ್ರ ಕೆ.ಸಿ ವ್ಯಾಲಿ ನೀರು ಹರಿಸುವ ಪ್ರಸ್ತಾಪ ಬಂದಿತ್ತು. ತಾವು ಅದನ್ನು ವಿರೋಧಿಸಿದ ಕಾರಣ ತಾಲ್ಲೂಕಿನ 34 ಕೆರೆಗಳಿಗೂ ವಿಸ್ತರಿಸಲು ಸಾಧ್ಯವಾಯಿತು ಎಂದು ಹೇಳಿದರು.

ADVERTISEMENT

ತಮ್ಮ ಬೆಂಬಲಿಗರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದು ಬಂದಿದ್ದಾರೆ. ತಾವು ಯಾರಿಗೂ ಆಸೆ, ಆಮಿಷ ತೋರಿಸಿಲ್ಲ. ಶಾಸಕ ನಾಗೇಶ್‌ ಅವರು ತಮ್ಮ ಅಧಿಕಾರ ಬಳಸಿ ಪೊಲೀಸರ ಮೂಲಕ ತಮ್ಮ ಬೆಂಬಲಿಗರನ್ನು ಸೆಳೆಯಲು ಬೆದರಿಕೆ ಮೂಲಕ ಆಮಿಷ ತೋರಿಸಿದರು. ಆದರೆ, ಬೆಂಬಲಿಗರು ಒಂದಿಂಚು ಧೃತಿಗೆಡಲಿಲ್ಲ. ತಾಲ್ಲೂಕಿನ ಕಾಂಗ್ರೆಸ್‌ನ ಶೇಕಡ 90ರಷ್ಟು ಕಾರ್ಯಕರ್ತರ ಪೈಕಿ ಹತ್ತರಷ್ಟು ಮಂದಿ ಮಾತ್ರ ಕೆ.ಎಚ್. ಮುನಿಯಪ್ಪ ಕಡೆಗೆ ಇದ್ದಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ ಮಾತನಾಡಿ, ಹಾಲಿ ಶಾಸಕರು ತಮ್ಮ ಬೆಂಬಲಿಗರು 15 ಗ್ರಾ.ಪಂ.ಗಳಲ್ಲಿ ಬೆಂಬಲಗಳಿಸಿದ್ದಾರೆಂದು ಹೇಳಿಕೆ ನೀಡುತ್ತಿದ್ದಾರೆ. ಅದು ಸುಳ್ಳು ಎಂದು ಸಾಬೀತುಪಡಿಸುವ ಸಲುವಾಗಿಯೇ ಮಂಜುನಾಥ್ ಬೆಂಬಲಿಗರು ಈ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಮುರಳಿ ಮಾತನಾಡಿ, ಶಾಸಕರು ಪಂಚಾಯಿತಿಗಳಲ್ಲಿ ತಮ್ಮ ಬೆಂಬಲಿಗರು ಗೆದ್ದಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ತಾಲ್ಲೂಕಿನಲ್ಲಿ ಎಷ್ಟು ಗ್ರಾಮಗಳಿವೆ, ಎಷ್ಟು ಪಂಚಾಯಿತಿಗಳಿವೆ ಎಂಬುದರ ಅರಿವೇ ಇಲ್ಲ ಎಂದು ಲೇವಡಿ ಮಾಡಿದರು.

ತಾ.ಪಂ ಸದಸ್ಯ ಸಿ.ವಿ. ಗೋಪಾಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್. ರಾಜೇಂದ್ರಗೌಡ ಮಾತನಾಡಿದರು.ನಗರಸಭೆ ಸದಸ್ಯ ಜಗನ್ಮೋಹನ್‌ ರೆಡ್ಡಿ, ತಾಲ್ಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್. ರಾಜೇಂದ್ರಗೌಡ, ನಿರ್ದೇಶಕ ಜಿ. ಗಂಗಿರೆಡ್ಡಿ, ಮುಖಂಡ ಶ್ರೀನಿವಾಸ್‌, ಜಮ್ಮನಹಳ್ಳಿ ಕೃಷ್ಣ, ಎಪಿಎಂಸಿ ಸದಸ್ಯ ಎಂ. ವೆಂಕಟರವಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.