ADVERTISEMENT

ಆವೇಶದಲ್ಲಿ ಮಾತು– ಶಾಸಕರಲ್ಲಿ ಕ್ಷಮೆ ಕೋರುತ್ತೇನೆ: KPCC ಸದಸ್ಯ ಸಂಜಯ್‍ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:31 IST
Last Updated 21 ಜುಲೈ 2025, 4:31 IST
ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು
ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು   

ಶ್ರೀನಿವಾಸಪುರ: ‘ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕುರಿತು ಈಚೆಗೆ ಸುದ್ದಿಗೋಷ್ಠಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಹಿಂಪಡೆಯುತ್ತಿದ್ದೇನೆ. ಅವರು ಕ್ಷೇತ್ರದ ಶಾಸಕರು, ಹಿರಿಯರು. ನಾನು ಆ ರೀತಿಯಾಗಿ ಮಾತನಾಡಬಾರದಾಗಿತ್ತು. ಆವೇಶದಲ್ಲಿ ಮಾತನಾಡಿದ್ದು, ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ’ ಎಂದು ಕೆಪಿಸಿಸಿ ರಾಜ್ಯ ಸದಸ್ಯ ಸಂಜಯ್‍ರೆಡ್ಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಾಸಕ ವೆಂಕಟಶಿವಾರೆಡ್ಡಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ನಮ್ಮ ನಾಯಕ ರಮೇಶ್‌ ಕುಮಾರ್‌ ಬಗ್ಗೆ ಆವೇಶದೊಂದಿಗೆ ಆರೋಪ ಮಾಡಿದ್ದರು. ನಾನು ಸಹ ಆವೇಶದೊಂದಿಗೆ ಶಾಸಕರ ವಿರುದ್ಧ ಮಾತನಾಡಿದ್ದು ನಿಜ. ಜೆಡಿಎಸ್‌ ಪಕ್ಷದವರೂ ಪತ್ರಿಕಾಗೋಷ್ಠಿ ನಡೆಸಿ ಒಬ್ಬರಿಗೊಬ್ಬರು ಅವಹೇಳನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲರೂ ಸೇರಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೈಜೋಡಿಸಬೇಕಿದೆ ಎಂದಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಮತವಿರುತ್ತದೆ’ ಎಂದರು.

‘ನಮ್ಮ ನಾಯಕ ರಮೇಶ್‌ ಕುಮಾರ್‌ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಪಡಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಈಚೆಗೆ ಕೆ.ಸಿ ವ್ಯಾಲಿ ನೀರು ನಿಂತು ಹೋಗಿತ್ತು. ಇದರ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮತ್ತೆ ನೀರು ಹರಿಸಲು ಸೂಚಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ನಮ್ಮ ನಾಯಕರ ಬಗ್ಗೆ ಶಾಸಕರು ಆವೇಶದಿಂದ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಸಹ ಆವೇಶದಿಂದ ಮಾತನಾಡಿದ್ದೆವು ಎಂದರು.

ಮುಖಂಡರಾದ ಅಶ್ವಥರೆಡ್ಡಿ, ನಾಗದೇಪಲ್ಲಿ ಶ್ರೀನಿವಾಸ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥರೆಡ್ಡಿ, ಕೆ.ಸಿ.ವೆಂಕಟರಾಮಣಾರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮನೋಹರ್, ಮುರಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.