ADVERTISEMENT

3ನೇ ಯತ್ನದಲ್ಲಿ ಕೆಪಿಎಸ್‌ಸಿ ಕನಸು ನನಸು

‘ಟೆಕ್ಕಿ’ ಕೆಲಸ ತೊರೆದವ ವಾಣಿಜ್ಯ ತೆರಿಗೆ ಅಧಿಕಾರಿ

ಜೆ.ಆರ್.ಗಿರೀಶ್
Published 25 ಡಿಸೆಂಬರ್ 2019, 16:13 IST
Last Updated 25 ಡಿಸೆಂಬರ್ 2019, 16:13 IST
ಜೆ.ರಾಜೇಶ್‌
ಜೆ.ರಾಜೇಶ್‌   

ಕೋಲಾರ: ವಿದ್ಯಾರ್ಥಿ ದಿಸೆಯಲ್ಲೇ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಡಳಿತ ಸೇವೆಗೆ ಬರುವ ಸಂಕಲ್ಪ ಮಾಡಿದ್ದ ನಗರದ ಜೆ.ರಾಜೇಶ್‌ ಅವರ ಕನಸು ನನಸಾಗಿದೆ.

ನಗರದ ಎಸ್‌.ಜಿ.ಲೇಔಟ್‌ನ ರಾಜೇಶ್‌ ಸುಶಿಕ್ಷಿತ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ತಂದೆ ಗೋವಿಂದಪ್ಪ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದರು. ತಾಯಿ ಭಾಗ್ಯಮ್ಮ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (ಎಸ್‌ಡಿಸಿ) ಸೇವೆ ಸಲ್ಲಿಸುತ್ತಿದ್ದಾರೆ.
ಗೋವಿಂದಪ್ಪ ಮತ್ತು ಭಾಗ್ಯಮ್ಮ ದಂಪತಿಯ 3 ಮಕ್ಕಳ ಪೈಕಿ ಎರಡನೇಯವರಾದ ರಾಜೇಶ್‌ ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಪಿಯುಸಿ ಓದಿದ ಇವರು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2008ರಲ್ಲಿ ಬಿ.ಇ ಪದವಿ ಪೂರೈಸಿದರು.

ADVERTISEMENT

ಬಳಿಕ ವಿಪ್ರೋ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಕೆಲಸ ಸಿಕ್ಕಿದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹಟಕ್ಕೆ ಬಿದ್ದು ದೆಹಲಿಯತ್ತ ಮುಖ ಮಾಡಿದರು. ದೆಹಲಿಯಲ್ಲಿ ಒಂದು ವರ್ಷ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದು 2009ರಲ್ಲಿ ಪ್ರಥಮ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ಬರೆದರು. ಆದರೆ, ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಬಳಿಕ 6 ಬಾರಿ ಯುಪಿಎಸ್‌ಸಿ ಬರೆದು ಮುಖ್ಯ ಪರೀಕ್ಷೆಯ ಹಂತ ತಲುಪಿದರೂ ಅದೃಷ್ಟ ಖುಲಾಯಿಸಲಿಲ್ಲ.

ದೆಹಲಿಯ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಲೇ ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮುಂದುವರಿಸಿದ್ದರು. 2010 ಹಾಗೂ 2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದರೂ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ.

ಆದರೂ ಛಲ ಬಿಡದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದ ರಾಜೇಶ್‌ 2017ರಲ್ಲಿ 3ನೇ ಬಾರಿಗೆ ಕೆಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ಸು ಕಂಡಿದ್ದಾರೆ. ಇದೀಗ ಕೆಪಿಎಸ್‌ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜೇಶ್‌ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ರಾಜೇಶ್‌ರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ನಿರೀಕ್ಷಿಸಿರಲಿಲ್ಲ: ದೆಹಲಿಯಿಂದ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ರಾಜೇಶ್‌, ‘ಈ ಹಿಂದೆ 2 ಬಾರಿ ಕೆಪಿಎಸ್‌ಸಿ ಪರೀಕ್ಷೆ ಬರೆದರೂ ಅದೃಷ್ಟ ಕೈಕೊಟ್ಟಿತು. ಪರೀಕ್ಷೆಗೆ ಹೆಚ್ಚು ಶ್ರಮ ಹಾಕಿದರೂ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಈ ಯಶಸ್ಸು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಪ್ರೋತ್ಸಾಹ ಕೊಡಬೇಕು. ನಾನು ಪರೀಕ್ಷೆಗೆ ದಿನದಲ್ಲಿ ಸುಮಾರು 10 ತಾಸು ಓದುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಷ್ಟು ಕಾಲ ಓದುತ್ತೇವೆ ಎನ್ನುವುದಕ್ಕಿಂತ ಕಲಿಕೆಯಲ್ಲಿ ಶ್ರದ್ಧೆ ಮುಖ್ಯ. ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಸಾಧನೆ ಕಷ್ಟವಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.