ADVERTISEMENT

ಕೋಲಾರ: ಕೆಆರ್‌ಐಡಿಎಲ್‌ ಅಕ್ರಮ; ತನಿಖೆಗೆ ಕರ್ನಾಟಕ ರೈತ ಸೇನೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 15:26 IST
Last Updated 16 ಆಗಸ್ಟ್ 2020, 15:26 IST

ಕೋಲಾರ: ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್‌) ನಡೆಸಿರುವ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದ್ದು, ಅಕ್ರಮದ ಸಂಬಂಧ ತನಿಖೆ ನಡೆಸಬೇಕು ಎಂದು ಕರ್ನಾಟಕ ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಒತ್ತಾಯಿಸಿದ್ದಾರೆ.

ಕೆಆರ್‌ಐಡಿಎಲ್‌ ವತಿಯಿಂದ ನಿರ್ಮಿಸಿರುವ ಕಟ್ಟಡಗಳು ಹಾಗೂ ರಸ್ತೆಗಳ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಕೆಆರ್‌ಐಡಿಎಲ್‌ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಕಾಮಗಾರಿಗಳ ಹಣ ದೋಚಿದ್ದಾರೆ ಎಂದು ಗಣೇಶ್‌ಗೌಡ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಅಧಿಕಾರಿಗಳು ಕಾಮಗಾರಿಗಳನ್ನೇ ನಡೆಸದೆ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಿದ್ದಾರೆ. ಗುತ್ತಿಗೆದಾರ ಅಲಿಖಾನ್‌ ಜತೆ ಸೇರಿ ಅಕ್ರಮಕ್ಕೆ ಸಂಬಂಧಪಟ್ಟ ಕಡತಗಳನ್ನು ನಾಪತ್ತೆ ಮಾಡಿದ್ದಾರೆ. ಅಕ್ರಮದ ತನಿಖೆಗಾಗಿ ಬಂದಿದ್ದ ಹಿರಿಯ ಅಧಿಕಾರಿಗಳಿಗೆ ಕಡತಗಳನ್ನು ನೀಡದೆ ಸತ್ಯ ಮರೆಮಾಚುವ ಸಂಚು ಮಾಡಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಕೆಆರ್‌ಐಡಿಎಲ್‌ ಪೂರ್ಣಗೊಳಿಸಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ. ಅಧಿಕಾರಿಗಳು ಅಲಿಖಾನ್‌ ಅವರನ್ನು ಸರ್ಕಾರಿ ರಜಾ ದಿನಗಳಂದು ಕೆಆರ್‌ಐಡಿಎಲ್‌ ಕಚೇರಿಗೆ ಕರೆಸಿಕೊಂಡು ಅಕ್ರಮದ ದಾಖಲೆಪತ್ರಗಳನ್ನು ತಿದ್ದಿದ್ದಾರೆ. ಜಿಲ್ಲಾಡಳಿತಕ್ಕೆ ಅಕ್ರಮದ ಸಂಗತಿ ತಿಳಿದಿದ್ದರೂ ಮೌನಕ್ಕೆ ಶರಣಾಗಿದೆ. ಕೆಆರ್‌ಐಡಿಎಲ್‌ನ ಎಲ್ಲಾ ಕಾಮಗಾರಿಗಳ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.