ADVERTISEMENT

ಕುಮಾರಸ್ವಾಮಿ ಪ್ರಬುದ್ಧ ರಾಜಕಾರಣಿಯಲ್ಲ: ಶ್ರೀರಾಮುಲು

ಬಾಲಿಷ ಮಾತು: ಆರೋಗ್ಯ ಸಚಿವ ಶ್ರೀರಾಮುಲು ಲೇವಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:24 IST
Last Updated 28 ಜನವರಿ 2020, 15:24 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಕೋಲಾರ: ‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗಾಂಭೀರ್ಯವಿಲ್ಲ. ಅವರು ಪ್ರಬುದ್ಧ ರಾಜಕಾರಣಿಯಲ್ಲ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದರು.

ತಾಲ್ಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತ ಹೆಣ್ಣು ಮಗಳು ಕಬ್ಬಿಗೆ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದಿರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು. ಕೊಪ್ಪಳದಲ್ಲಿ ರೈತರು ಹೋರಾಟ ಮಾಡಿದ್ದಾಗ ತಾವು ತಮಗೆ ಮತ ಹಾಕಿಲ್ಲವೆಂದು ಬಾಲಿಷವಾಗಿ ಮಾತನಾಡಿದ್ದರು’ ಎಂದು ಟೀಕಿಸಿದರು.

‘ಕುಮಾರಸ್ವಾಮಿ ಸೈನಿಕರ ವಿಚಾರದಲ್ಲೂ ವ್ಯಂಗ್ಯವಾಡಿದ್ದರು. ಇದೀಗ ಮಂಗಳೂರಿನಲ್ಲಿ ಬಾಂಬ್‌ ಪತ್ತೆಯಾದ ಪ್ರಕರಣ ಸಂಬಂಧ ಮಿಣಿ ಮಿಣಿ ಪೌಡರ್ ಎಂದು ಹೇಳಿದ್ದಾರೆ. ಅವರಿಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಪುಟ ವಿಸ್ತರಣೆ: ‘ಉಪ ಚುನಾವಣೆಯಲ್ಲಿ ಗೆದ್ದ ಶಾಸಕರೆಲ್ಲರೂ ಸಚಿವರಾಗಬೇಕೆಂದು ಬಯಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಆ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಬೇಕಿದೆ’ ಎಂದರು.

‘ದೆಹಲಿ ವಿಧಾನಸಭಾ ಚುನಾವಣೆ ನಂತರ ಅಥವಾ ಅದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗಬಹುದು. ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಪಕ್ಷ ಈಗಾಗಲೇ ಕೆಲವರಿಗೆ ಸಚಿವಗಾಗಿ ಹಾಗೂ ಮತ್ತೆ ಕೆಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ತೀರ್ಮಾನಿಸಿದೆ. ಸೋತವರ ವಿಚಾರದಲ್ಲಿ ಪಕ್ಷವೇ ನಿರ್ಧಾರ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಘೋಷಣೆ: ತಿರುಪತಿಗೆ ಹೊರಟಿದ್ದ ಶ್ರೀರಾಮುಲು ಅವರು ಮಾರ್ಗ ಮಧ್ಯೆ ಕೆಂದಟ್ಟಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು, ‘ಮುಂದಿನ ಉಪ ಮುಖ್ಯಮಂತ್ರಿ ಶ್ರೀರಾಮುಲು ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಆಗ ಸಚಿವರು ಮೌನವಾಗಿಯೇ ಮುಂದೆ ಸಾಗಿದರು.

ಬಳಿಕ ಅಭಿಮಾನಿಗಳ ಘೋಷಣೆಗೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಜನ ಬಯಸಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ನಿರ್ಧಾರಕ್ಕೆ ಬದ್ಧ’ ಎಂದು ಹೇಳಿದರು.

ಮಾಜಿ ಸಚಿವ ವರ್ತೂರ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ, ನಮ್ಮ ಕಾಂಗ್ರೆಸ್‌ ಪಕ್ಷದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.