
ಶಾಸಕ ಕೆ.ವೈ.ನಂಜೇಗೌಡ
ಕೋಲಾರ: ನನ್ನ ಎದುರಾಳಿಗೆ ಮುಖಭಂಗವಾಗಿದ್ದು, ನನಗೆ ನ್ಯಾಯಾಲಯದಿಂದ ನ್ಯಾಯ ದೊರಕಿದೆ. ಮಾಲೂರು ತಾಲ್ಲೂಕಿನ ಜನರು, ಕಾಂಗ್ರೆಸ್ ಕಾರ್ಯಕರ್ತರು, ದೇವರು, ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನ್ಯಾಯಾಲಯದಲ್ಲಿ ಹೋರಾಡುತ್ತಾ ಬಹಳ ನೋವು ಅನುಭವಿಸಿದ್ದೇನೆ. ಕೆಲವರು ಮರು ಚುನಾವಣೆ ನಡೆಯಲಿದೆ ಎಂದು ಹೇಳುತ್ತಾ ನನಗೆ ಹಾಗೂ ಕುಟುಂಬದವರಿಗೆ ತೊಂದರೆ ಕೊಟ್ಟರು. ಸುಪ್ರೀಂ ಕೋರ್ಟ್ ಆದೇಶದಂತೆ ಮರು ಮತ ಎಣಿಕೆ ಯಶಸ್ವಿಯಾಗಿ ನಡೆದಿದೆ. ಎಲ್ಲದಕ್ಕೂ ತೆರೆಬಿದ್ದಿದ್ದು, ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ. ಅಂತಿಮ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಘೋಷಿಸಲಿದೆ ಎಂದರು.
ಮರು ಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹಿಂದಿನ ಮತ ಎಣಿಕೆಯಲ್ಲಿ ಬಂದಿದ್ದ ಮತಸಂಖ್ಯೆಗಳ ಪ್ರಮಾಣದಲ್ಲಿಯೇ ಬಂದಿದೆ. ಇದು ಅಧಿಕಾರಿಗಳ ನ್ಯಾಯಸಮ್ಮತ ಕಾರ್ಯವಿಧಾನಕ್ಕೆ ಸಾಕ್ಷಿ. ವೋಟ್ ಚೋರಿ ಎಂಬುದು ಕಾಂಗ್ರೆಸ್ ಪಕ್ಷದವರಿಗೆ ಗೊತ್ತಿಲ್ಲ ಎಂದು ನುಡಿದರು.
ಇನ್ನುಮುಂದೆ ಎದುರಾಳಿ ಕೆ.ಎಸ್.ಮಂಜುನಾಥಗೌಡ ಬಗ್ಗೆ ನಾನು ಯಾವುದೇ ವಿಚಾರ ಮಾತನಾಡುವುದಿಲ್ಲ ಎಂದರು.
ನಮ್ಮ ಅನುಮಾನ ಇನ್ನೂ ನಿವಾರಣೆ ಆಗಿಲ್ಲ. ಕೆಲ ಆಕ್ಷೇಪಗಳನ್ನು ಚುನಾವಣಾಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ. ನ್ಯೂನತೆಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸುತ್ತೇವೆ ಎಂದು ಪರಾಜಿತ ಅಭ್ಯರ್ಥಿ, ಬಿಜೆಪಿ ಮುಖಂಡ ಕೆ.ಎಸ್.ಮಂಜುನಾಥಗೌಡ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಸೋತಿದ್ದ ವ್ಯಕ್ತಿಗೆ ಹಿನ್ನಡೆ ಆಗುವುದಾದರೂ ಹೇಗೆ? ಗೆದ್ದಿರುವವರಿಗೆ ಅಭಿನಂದನೆ ಸಲ್ಲಿಸೋಣ ಎಂದರು.
ಅಂಚೆ ಮತಗಳಲ್ಲಿ ಕೆಲವೊಂದು ವ್ಯತ್ಯಾಸ ಕಂಡುಬಂದಿದೆ. ಆದರೆ, ಇವಿಎಂ ಮತಗಳಲ್ಲಿ ವ್ಯತ್ಯಾಸ ಆಗಿಲ್ಲ ಎಂದು ತಿಳಿಸಿದರು. 5 ವಿವಿ ಪ್ಯಾಟ್ ತಾಳೆ ಮಾಡಲಾಗಿದೆ. ಬಾಕಿ ಯಂತ್ರದ ತಾಳೆ ಮಾಡಿಲ್ಲ. ಎರಡು ಯಂತ್ರವು ಕೆಟ್ಟು ಹೋಗಿದೆ ಎಂದರು.
ಗೌರವದಿಂದ ಮಾತನಾಡಿದರೆ ನಾನು ಕೂಡ ಗೌರವ ಕೊಟ್ಟು ಮಾತನಾಡುವೆ. ರಾಜಕೀಯ ನನಗೆ ಜೀವನವಲ್ಲ, ಅನ್ಯಾಯ ಖಂಡಿಸಿದ್ದು, ಮುಂದೆಯಾದರೂ ಈ ರೀತಿ ಆಗದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂದರು.
ಕಾನೂನುಬದ್ಧವಾಗಿಯೇ ಎಣಿಕೆ ನಡೆದಿದೆ. ಚುನಾವಣಾಧಿಕಾರಿಗಳು ನಮ್ಮೆಲ್ಲರ ಆಕ್ಷೇಪಗಳಿಗೆ ಸ್ಪಂದಿಸಿದ್ದಾರೆ. ಸಣ್ಣಪುಟ್ಟ ಬದಲಾವಣೆ ಆಗಿದ್ದು, ಫಲಿತಾಂಶದ ಬಗ್ಗೆ ಮಾತನಾಡುವಂತಿಲ್ಲಹೂಡಿ ವಿಜಯಕುಮಾರ್, ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.