ಬಂಗಾರಪೇಟೆ: ದೇಶದ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬುಧವಾರ ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ‘ಕಾರ್ಮಿಕ ವರ್ಗ ನಡೆಸಿದ ಹಲವಾರು ಹೋರಾಟಗಳಿಂದ ದೇಶದಲ್ಲಿ ಕಾರ್ಮಿಕರಿಗೆ ಕಾನೂನಾತ್ಮಕ ರಕ್ಷಣೆ ಸಿಕ್ಕಿದೆ. ಡಾ.ಅಂಬೇಡ್ಕರ್ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರಿಗೆ ಪೂರಕವಾದ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದ್ದರು. ಈ ಎಲ್ಲ ಕಾನೂನುಗಳನ್ನು ಇಂದಿನ ಕೇಂದ್ರ ಸರ್ಕಾರವು ರದ್ದುಪಡಿಸಿ ಲೋಕಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಅನುಮೋದನೆ ಪಡೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳು ಬಂಡವಾಳ ಹೂಡುವಂತೆ ಮಾಡಲು ಕಾರ್ಮಿಕ ಕಾನೂನುಗಳ ಸರಳೀಕರಣದ ಹೆಸರಿನಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆವರೆಗೆ ಹೆಚ್ಚಿಸಲು, ಕಡಿಮೆ ವೇತನಕ್ಕೆ ಯಾವುದೇ ಸೌಲಭ್ಯಗಳು ಇಲ್ಲದೆ ಕಾರ್ಪೋರೇಟ್ ಕಂಪನಿಗಳಲ್ಲಿ ಗುಲಾಮರ ರೀತಿ ದುಡಿಯುವ ಪರಿಸ್ಥಿತಿ ತರಲು ಕೇಂದ್ರ ಸರ್ಕಾರ ಹೊರಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
8 ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಸೇರಿದಂತೆ ಇನ್ನಿತರ ಹಕ್ಕುಗಳನ್ನು ಇಲ್ಲದಂತೆ ಮಾಡಿ, ಕಾರ್ಮಿಕರನ್ನು ಗುಲಾಮರಾಗಿಸಲು ಕೇಂದ್ರ ಸರ್ಕಾರವು ನಾಲ್ಕು ಸಂಹಿತೆಗಳನ್ನು ರೂಪಿಸಿದ್ದು, ಅವುಗಳನ್ನು ಹಿಂಪಡೆಯಬೇಕು.
ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಮಹಿಳಾ ನೌಕರರಿಗೂ ರಾಷ್ಟ್ರವ್ಯಾಪಿ ₹26 ಸಾವಿರ ಹಾಗೂ ರಾಜ್ಯವ್ಯಾಪಿ ₹35 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆರ್.ಪ್ರಭಾಕರ್, ಬಿ.ಎಲ್. ಕೇಶವರಾವ್, ಎಂ.ಮೋಹನ್, ವಿ.ರಾಮಕೃಷ್ಣಪ್ಪ, ವಿ.ವಿಜಯಕುಮಾರ್, ಎಂ.ಜಯಲಕ್ಷ್ಮಿ, ರಾಜಪ್ಪ, ಚಂದ್ರಪ್ಪ, ಜಿ.ಪೆರುಮಾಳಪ್ಪ, ಕಲ್ಲುಕೆರೆ ಎಂ.ಬಾಬು, ಎ.ಪಿಚ್ಚಕಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.