ADVERTISEMENT

ಕೋಲಾರ: ಕಾರ್ಮಿಕ ಸಂಹಿತೆ ವಾಪಸಾತಿಗೆ ಆಗ್ರಹ

ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನ; ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:19 IST
Last Updated 10 ಜುಲೈ 2025, 5:19 IST
ಕೋಲಾರದಲ್ಲಿ ಬುಧವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಪ್ರತಿಭಟನೆ ನಡೆಸಿದರು
ಕೋಲಾರದಲ್ಲಿ ಬುಧವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಪ್ರತಿಭಟನೆ ನಡೆಸಿದರು    

ಕೋಲಾರ: ದೇಶದ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ನೂಕುವ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ವಾಪಸು ಪಡೆಯಬೇಕೆಂದು ಒತ್ತಾಯಿಸಿ ಹಲವಾರು ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಗಾಂಧಿ ವನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಕರಪತ್ರ ವಿತರಿಸಿದರು.

ಪ್ರತಿಭಟನಕಾರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಕಾರ್ಮಿಕ ವರ್ಗ ನಡೆಸಿದ ಹಲವಾರು ಹೋರಾಟಗಳಿಂದಾಗಿ ದೇಶದಲ್ಲಿ ಕಾರ್ಮಿಕರಿಗೆ ಹಲವಾರು ಕಾನೂನಾತ್ಮಕ ರಕ್ಷಣೆ ಸಿಕ್ಕಿದೆ. ಡಾ.ಅಂಬೇಡ್ಕರ್‌ ಕಾರ್ಮಿಕ ಸಚಿವರಾಗಿದ್ದಾಗ ಹಲವಾರು ಕಾನೂನು ಜಾರಿಗೊಳಿಸಿದ್ದರು. ಈ ಎಲ್ಲಾ ಕಾನೂನುಗಳನ್ನು ಇಂದಿನ ಕೇಂದ್ರ ಸರ್ಕಾರವು ರದ್ದುಪಡಿಸಿ ಲೋಕಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಏಕಪಕ್ಷೀಯವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಅನುಮೋದನೆ ಪಡೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳು ಬಂಡವಾಳ ಹೂಡಲು ದೇಶದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಸರಳೀಕರಣ ಮಾಡಬೇಕೆಂದು ಹೇಳಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆ ತನಕ ಹೆಚ್ಚಿಸಲು, ಕಡಿಮೆ ವೇತನಕ್ಕೆ ಯಾವುದೇ ಸೌಲಭ್ಯಗಳು ಇಲ್ಲದೇ ಕಾರ್ಪೋರೇಟ್ ಕಂಪನಿಗಳಲ್ಲಿ ಗುಲಾಮರ ರೀತಿಯಲ್ಲಿ ದುಡಿಯುವ ಪರಿಸ್ಥಿತಿಯನ್ನು ತರಲು ಕೇಂದ್ರ ಸರ್ಕಾರ ಹೊರಟಿದೆ’ ಎಂದು ಖಂಡಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ‘ಕಾರ್ಮಿಕರ ಶ್ರಮವನ್ನು ಕಾರ್ಪೊರೇಟ್ ಕಂಪನಿಗಳು ದೋಚಲು ಅನುಕೂಲ ಕಲ್ಪಿಸಲು ಉದ್ದೇಶದಿಂದ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಕಾರ್ಮಿಕ ಸಂಘಗಳ ಚಟುವಟಿಕೆಗಳನ್ನು ನಿಯಂತ್ರಿಸಿ, ಕಾರ್ಪೊರೇಟ್ ಕಂಪನಿಗಳು ಮನಸೋ ಇಚ್ಛೆ ಕಾರ್ಮಿಕರನ್ನು ದುಡಿಸಿಕೊಳ್ಳಲು ಈ ಸಂಹಿತೆಗಳು ಅವಕಾಶ ನೀಡಲಿವೆ. ಕಾಯಂ ಸ್ವರೂಪದ ಕಾರ್ಮಿಕ ವ್ಯವಸ್ಥೆಯನ್ನು ತೆಗೆದು ಹಾಕಿ ಎಲ್ಲವೂ ಗುತ್ತಿಗೆ, ಹೊರ ಗುತ್ತಿಗೆ ಆಧಾರದಲ್ಲಿ ದುಡಿಸಲಾಗುತ್ತಿದೆ. ಆದ್ದರಿಂದ ಈ ಕಾರ್ಮಿಕ ಸಂಹಿತೆಗಳನ್ನು ವಾಪಸು ಪಡೆಯಬೇಕು. ಅಂಗನವಾಡಿ, ಬಿಸಿಯೂಟ, ಅಂಗನವಾಡಿ ಮತ್ತಿತರರ ಯೋಜನಾ ಕಾರ್ಮಿಕರು, ಗ್ರಾಮ ಪಂಚಾಯಿತಿ ನೌಕರಿರಗೆ ಕನಿಷ್ಠ ₹ 36 ಸಾವಿರ ವೇತನ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್‌ ಮಾತನಾಡಿ, ‘2020 ರಲ್ಲಿ ದೆಹಲಿಯಲ್ಲಿ ಒಂದು ವರ್ಷ ರೈತರು ದಿಟ್ಟ ಹೋರಾಟ ನಡೆಸಿದ್ದರಿಂದ ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ಮಾಡುವುದಿಲ್ಲವೆಂದು ಭರವಸೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಪರೋಕ್ಷವಾಗಿ ಈ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರೈತರು ಮತ್ತು ಕಾರ್ಮಿಕರು ಜಂಟಿಯಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದರು.

ಅಂಗನವಾಡಿ ನೌಕರರ ಸಂಘದ ನಾಯಕಿ ವಿ.ಮಂಜುಳಾ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಎಂ.ಭೀಮರಾಜ್, ಎಸ್.ಆಶಾ, ಕೈಗಾರಿಕಾ ಕಾರ್ಮಿಕ ಸಂಘದ ಮುಖಂಡರಾದ ಹರೀಶ್, ನಿಖಿಲ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡರಾದ ವಿ.ವೆಂಕಟರಾಮೇಗೌಡ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಕಲ್ಪನಾ, ಲಕ್ಷ್ಮಿದೇವಮ್ಮ, ಹೊಗರಿ ನಾಗರಾಜಪ್ಪ, ಗದ್ದೆಕಣ್ಣೂರು ನಾರಾಯಣಪ್ಪ, ಆರೋಗ್ಯನಾಥನ್, ಶಿವರಾಜ್, ಮುನಿವೆಂಕಟಪ್ಪ, ಮೂರ್ತಿ, ಅಂಬರೀಶ್, ಪೃಥ್ವಿ, ರಮೇಶ್, ಅವಿನಾಶ್, ಜ್ಯೋತಿ ಕುಮಾರ್, ಸಂತೋಷ್ ಒಂಬರೆಡ್ಡಿ, ಶರತ್, ನಾರಾಯಣಸ್ವಾಮಿ, ಸುನೀಲ್, ಎಚ್.ವಿ.ನಿಖಿಲ್, ನಂದನ್‍ ಕುಮಾರ್, ನಿಖಿಲ್ ಬಿ.ಇ., ಅರುಣ, ಶಿವಕುಮಾರ್, ಸೂರ್ಯ, ಮೇಘನಾ ಭಾಗವಹಿಸಿದ್ದರು..

ಗಾಂಧಿ ವನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲಕ್ಕೆ ಯತ್ನ–ಆರೋಪ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಒತ್ತಾಯ

ಸಂಘ ಮಾಡುವಂತಿಲ್ಲ ಮುಷ್ಕರ ನಡೆಸುವಂತಿಲ್ಲ

‘ಕಾರ್ಮಿಕರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಂಘ ರಚಿಸಿಕೊಳ್ಳಲು ಇರುವ ಸಂವಿಧಾನಬದ್ಧ ಹಕ್ಕನ್ನು ನಿರಾಕರಿಸಲಾಗಿದೆ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾರ್ಮಿಕರು ಮುಷ್ಕರ ಮಾಡಿದರೆ ಸಂಘಟಿತ ಅಪರಾಧವೆಂದು ಜೈಲಿಗೆ ಹಾಕಲು ಈ ಸಂಹಿತೆಗಳು ಅವಕಾಶ ನೀಡಲಿವೆ. ಆಡಳಿತ ಮಂಡಳಿಯೊಂದಿಗೆ ಸಮಸ್ಯೆಗಳ ಕುರಿತು ಚೌಕಾಸಿ ಮಾಡುವ ಹಕ್ಕನ್ನು ಕಸಿಯಲಾಗಿದೆ. ಜೊತೆಗೆ ಕಾರ್ಮಿಕರ ಮೇಲೆ ಆಡಳಿತ ಮಂಡಳಿಯು ಸಣ್ಣ ತಪ್ಪುಗಳಿಗೆ ಕೆಲಸದಿಂದ ಕಿತ್ತು ಹಾಕಲು ಅವಕಾಶ ಕೊಡಲಿದೆ’ ಎಂದು ಗಾಂಧಿನಗರ ನಾರಾಯಣಸ್ವಾಮಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.