ADVERTISEMENT

ನೀರಿಲ್ಲದೆ ಶೌಚಾಲಯಕ್ಕೆ ಬೀಗ: ಕಾಮಸಮುದ್ರ ಹೋಬಳಿಯ ನಾಡ ಕಚೇರಿಯಲ್ಲಿ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:36 IST
Last Updated 31 ಆಗಸ್ಟ್ 2025, 7:36 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಕುಡಿಯುವ ನೀರು ಮರೀಚಿಕೆ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಕುಡಿಯುವ ನೀರು ಮರೀಚಿಕೆ   

ಬಂಗಾರಪೇಟೆ: ಕಾಮಸಮುದ್ರ ಹೋಬಳಿಯ ನಾಡ ಕಚೇರಿ ಪ್ರಾರಂಭಿಸಿ ಎರಡು ವರ್ಷವಾಗಿದೆ. ಆದರೆ, ಕಚೇರಿಗೆ ಈವರೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ವಿವಿಧ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಬರುವ ಜನಸಾಮಾನ್ಯರು ದೂರುತ್ತಾರೆ. 

ನಾಡಕಚೇರಿಗೆ ಬರುವವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಇದಕ್ಕೆ ನೀರಿನ ಸಂಪರ್ಕವೇ ಇಲ್ಲ. ಇದರಿಂದಾಗಿ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಸಿಬ್ಬಂದಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಜನರು ಆರೋಪಿಸುತ್ತಾರೆ. 

ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸರ್ಕಾರವು  ಹೋಬಳಿ ಕೇಂದ್ರಗಳಲ್ಲಿ ನಾಡಕಚೇರಿ ತೆರೆದಿದೆ. ತಾಲ್ಲೂಕಿನಲ್ಲಿ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ನಾಡ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದು ಹೋಗುತ್ತಾರೆ. ಇದರಿಂದಾಗಿ ಬಾಡಿಗೆ ಕಟ್ಟಡದಲ್ಲಿದ್ದ ಕಚೇರಿಯನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗಿದೆ. ಅದು ಲೋಕಾರ್ಪಣೆಯಾಗಿ ಎರಡು ವರ್ಷವೂ ಕಳೆದಿದ್ದು, ಜನರಿಗೆ ಸೇವೆಯನ್ನೂ ಕಲ್ಪಿಸುತ್ತಿದೆ. 

ADVERTISEMENT

ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್, ಜನನ ಮತ್ತು ಮರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ವಿವಿಧ ಯೋಜನೆಗಳು ಸೇರಿದಂತೆ 20ಕ್ಕೂ ಹೆಚ್ಚಿನ ಸೌಲಭ್ಯ ಪಡೆಯಲು ಜನ ಇಲ್ಲಿಗೆ ಬರುತ್ತಾರೆ. ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ನೀರಿನ ಸಂಪರ್ಕವೇ ಕಲ್ಪಿಸಿಲ್ಲ. ಇದರಿಂದಾಗಿ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಜೊತೆಗೆ ಕುಡಿಯುವ ನೀರು ಇಲ್ಲಿ ಲಭ್ಯವಿಲ್ಲ ಎಂದು ಜನರು ಅಲವತ್ತುಕೊಂಡರು. 

ಕಾಮಸಮುದ್ರ ಗ್ರಾಮದಿಂದ ಬಹುತೇಕ ಒಂದು ಕಿ.ಮೀ ದೂರದಲ್ಲಿ ಹೊಸ ನಾಡ ಕಚೇರಿಯ ಕಟ್ಟಡವಿದೆ. ಇದರಿಂದಾಗಿ ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಆದರೆ, ಪಂಚಾಯಿತಿಯಿಂದ ನಾಡಕಚೇರಿ ಸಮೀಪದವರೆಗಿನ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ನಾಡಕಚೇರಿ ಪಕ್ಕದಲ್ಲೇ ಎರಡು ಪೆಟ್ರೋಲ್ ಬಂಕ್‌ಗಳಿದ್ದು, ಅವುಗಳಿಗೂ ನೀರಿನ ಸಂಪರ್ಕವಿದೆ ಎನ್ನುತ್ತಾರೆ ಸ್ಥಳೀಯರು. 

ಮೂತ್ರ ವಿಸರ್ಜನೆಗೆ ಬಯಲು ಪ್ರದೇಶದ ಅವಲಂಬಿಸುವಂತಾಗಿದೆ. ಇದರಿಂದ ತುಂಬಾ ಕಷ್ಟಕರವಾಗಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ನಾಡ ಕಚೇರಿ ಕೇಂದ್ರದ ಬಳಿಯ ಶೌಚಾಲಯಕ್ಕೆ ನೀರಿನ ಸಂಪರ್ಕ ಇಲ್ಲದೆ ಬೀಗ ಹಾಕಿರುವುದು
ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ನಗರವು ಅನೈರ್ಮಲ್ಯವಾಗಿದೆ. 
ತಿಪ್ಪಾರೆಡ್ಡಿ ಕಾಮಸಮುದ್ರ
ನಾಡಕಚೇರಿ ಮತ್ತು ಶೌಚಾಲಯಕ್ಕೆ ಶೀಘ್ರವೇ ಕುಡಿಯುವ ಮತ್ತು ಬಳಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. 
ವಾಣಿ, ಪಿಡಿಒ 
ಟ್ಯಾಂಕರ್ ಮೊರೆ ಹೋದ ಸಿಬ್ಬಂದಿ
ನೀರಿನ ವ್ಯವಸ್ಥೆ ಇಲ್ಲದ ಕಾರಣ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಶೌಚಾಲಯಕ್ಕೆ ಪರದಾಡುವಂತಾಗಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಖಾಸಗಿಯವರಿಂದ ಆಗ್ಗಾಗ ನೀರಿನ ಟ್ಯಾಂಕರ್‌ ಖರೀದಿಸುತ್ತಿದ್ದಾರೆ. ಶೌಚಾಲಯ ಬಳಕೆಗೆ ಸಿಬ್ಬಂದಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದು ತಮಗೆ ಮೀಸಲಿಟ್ಟಿರುವ ಶೌಚಾಲಯವನ್ನು ಮಾತ್ರ ಬಳಸುತ್ತಿದ್ದಾರೆ. ಸಾರ್ವಜನಿಕರಿಗಾಗಿ ಮೀಸಲಿಟ್ಟಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಅನಿವಾರ್ಯವಾಗಿ ಬಯಲು ಶೌಚದ ಮೇಲೆ ಅವಲಂಬಿಸುವಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.