ADVERTISEMENT

ರೇಷ್ಮೆ ಕೃಷಿಯಲ್ಲಿ ಖುಷಿ ಕಂಡ ಲಕ್ಷ್ಮಮ್ಮ

120 ಮೊಟ್ಟೆಗೆ 141 ಕೆ.ಜಿ ಗೂಡು ಉತ್ಪಾದನೆ

ಕಾಂತರಾಜು ಸಿ. ಕನಕಪುರ
Published 13 ಏಪ್ರಿಲ್ 2022, 3:47 IST
Last Updated 13 ಏಪ್ರಿಲ್ 2022, 3:47 IST
ಲಕ್ಷ್ಮಮ್ಮ
ಲಕ್ಷ್ಮಮ್ಮ   

ಬಂಗಾರಪೇಟೆ: ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ತಾಲ್ಲೂಕಿನ ಹುಲಿಬೆಲೆ ಗ್ರಾಮದ ಲಕ್ಷ್ಮಮ್ಮ ಗೂಡು ಉತ್ಪಾದನೆಯಲ್ಲಿ ದಾಖಲೆ ಬರೆದಿದ್ದಾರೆ.

ರೇಷ್ಮೆ ದ್ವಿತಳಿಯ 100 ಮೊಟ್ಟೆಗೆ ಸರಾಸರಿ 87.38 ಕೆಜಿ (ಫೆಬ್ರುವರಿಯಲ್ಲಿ) ಗೂಡು ಉತ್ಪಾದಿಸಿದ್ದು, 2020-21ನೇ ಸಾಲಿನ ರಾಜ್ಯಮಟ್ಟದ ತೃತೀಯ ಉತ್ತಮ ಮಹಿಳಾ ರೇಷ್ಮೆ ಬೆಳೆಗಾರರಾಗಿ ಆಯ್ಕೆಯಾಗಿದ್ದಾರೆ.

ಪ್ರಗತಿಪರ ಮಹಿಳಾ ರೇಷ್ಮೆ ಬೆಳೆಗಾರರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅವರು ಕಳೆದ ಮಾರ್ಚ್‌ನಲ್ಲಿ 120 ಮೊಟ್ಟೆಗೆ 141 ಕೆ.ಜಿ ರೇಷ್ಮೆಗೂಡು ಉತ್ಪಾದಿಸಿ, ತನ್ನ ಮೊದಲನೇ ದಾಖಲೆ ಮುರಿದಿರುವುದು ಮತ್ತೊಂದು
ವಿಶೇಷ.

ADVERTISEMENT

ಇವರು 30 ವರ್ಷದಿಂದ ರೇಷ್ಮೆ ಕೃಷಿಯಲ್ಲಿ ತೊಡಗಿದ್ದು, ಕೋಲಾರ ಚಿನ್ನ (ಸಿಬಿ) ತಳಿಯ ಗೂಡು ಉತ್ಪಾದಿಸುತ್ತಿದ್ದರು. ಇಲ್ಲಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಶ್ರೀನಿವಾಸ್ ಅವರ ನಿರ್ದೇಶನದ ಮೇರೆಗೆ ನಾಲ್ಕು ವರ್ಷದಿಂದ ದ್ವಿತಳಿ (ಬೈವೋಲ್ಟಿನ್) ಗೂಡು ಉತ್ಪಾದನೆಗೆ ಬದಲಾಗಿದ್ದಾರೆ.

‘1.20 ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದು, ವರ್ಷಕ್ಕೆ 8 ಬೆಳೆ ತೆಗೆಯುತ್ತಿದ್ದೇನೆ. ಕೋಲಾರ ಚಿನ್ನಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದ್ವಿತಳಿ ಗೂಡು ಉತ್ಪಾದಿಸಿ ಉತ್ತಮ ಲಾಭಗಳಿಸಬಹುದು’ ಎನ್ನುವುದು ಲಕ್ಷ್ಮಮ್ಮ ಅವರ ನುಡಿ.

3.2.5 ಮತ್ತು 3.5ರ ಪದ್ಧತಿಯಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆಯಲಾಗಿದೆ. ವರ್ಷದಲ್ಲಿ ಮೂರು ಬಾರಿ ಉಳುಮೆ ಮಾಡಿ, ಎರಡು ಬಾರಿ ತಿಪ್ಪೆಗೊಬ್ಬರ, ಎರಡ್ಮೂರು ಬೆಳೆಗೆ ಒಮ್ಮೆ ಬೇವಿನ ಹಿಂಡಿ ನೀಡಲಾಗುತ್ತಿದೆ. ಕಡಿಮೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದು, ಉತ್ತಮ ಗುಣಮಟ್ಟದ ಗೂಡು ಉತ್ಪಾದಿಸಲಾಗುತ್ತಿದೆ.

‘ಎರಡನೇ ಜ್ವರದ ಹುಳು ತಂದು ಬೆಳೆ ಮಾಡಲಾಗುತ್ತಿದೆ. ಇಪ್ಪತ್ತಾರು ದಿನಕ್ಕೆ ಒಂದು ರೇಷ್ಮೆ ಬೆಳೆ ತೆಗೆಯುತ್ತೇವೆ. ಬೆಳೆಯಾದ ಕೂಡಲೇ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛ ಮಾಡುತ್ತಿದ್ದು, ಎರಡು ವಾರ ಬಿಟ್ಟು ಮತ್ತೆ ಬೆಳೆ ಬೆಳೆಯುತ್ತೇವೆ’ ಎನ್ನುತ್ತಾರೆ ಲಕ್ಷ್ಮಮ್ಮ ಅವರ ಮಗ ಮಹಾಲಿಂಗಂ.

ಕಳೆದ ಫೆಬ್ರುವರಿಯಲ್ಲಿ ಇವರು ಬೆಳೆದ ರೇಷ್ಮೆಗೂಡು ಒಂದು ಕೆ.ಜಿಗೆ ₹ 986ಕ್ಕೆ ಮಾರಾಟವಾಗಿದೆ. ಕೋಲಾರ ಮಾರುಕಟ್ಟೆಯಲ್ಲಿ ಇದು ಇಲ್ಲಿಯವರೆಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಗೂಡು ಎಂದು ದಾಖಲಾಗಿದೆ. ಕೋಲಾರ ಚಿನ್ನ ಬೆಳೆಯುತ್ತಿದ್ದ ಸಂದರ್ಭದಲ್ಲೂ ಎರಡು ಬಾರಿ ದಾಖಲೆ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಅಭಿನಂದನಾ ಪತ್ರಗಳಿವೆ. ಎರಡು ಕೊಳವೆಬಾವಿ ಇದ್ದು, ಉತ್ತಮ ಮಳೆಯಾದ ಕಾರಣ ನೀರಿಗೆ ಬರವಿಲ್ಲ. ರೇಷ್ಮೆ ಜತೆಗೆ ಸೀಮೆ ಹಸು, ಮೂರು ಕುರಿ, ಎಮ್ಮೆ ಸಾಕಾಣಿಕೆ
ಮಾಡುತ್ತಿದ್ದಾರೆ.

‘ಗುಣಮಟ್ಟದ ಸೊಪ್ಪು, ಉತ್ತಮ ಹುಳು ಮನೆಯ ವಾತಾವರಣವನ್ನು ನಿರ್ವಹಣೆ ಮಾಡಿ, ಗುಣಮಟ್ಟದ ಗೂಡು ಉತ್ಪಾದಿಸುತ್ತೇವೆ. ಅದಕ್ಕೆ ನನ್ನ ಮಕ್ಕಳಾದ ಮಹಾಲಿಂಗಂ ಮತ್ತು ಪಾರ್ಥಸಾರಥಿ ನೆರವಾಗಿದ್ದಾರೆ’ ಎನ್ನುತ್ತಾರೆ ಲಕ್ಷ್ಮಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.