ADVERTISEMENT

ಲಿಂಗಾಯತ ಸಮುದಾಯ ಭವನಕ್ಕೆ ಜಾಗ: ಶಾಸಕ ಕೊತ್ತೂರು ಭರವಸೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:48 IST
Last Updated 2 ಮಾರ್ಚ್ 2026, 6:48 IST
ಕೋಲಾರದಲ್ಲಿ ಭಾನುವಾರ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸ್ವಾಮೀಜಿಗಳು, ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಉದ್ಘಾಟಿಸಿದರು
ಕೋಲಾರದಲ್ಲಿ ಭಾನುವಾರ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸ್ವಾಮೀಜಿಗಳು, ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಉದ್ಘಾಟಿಸಿದರು   

ಕೋಲಾರ: ವೀರಶೈವ ಲಿಂಗಾಯತ ಸಮುದಾಯ ಭವನಕ್ಕೆ ಅತಿ ಶೀಘ್ರದಲ್ಲೇ ಜಾಗ ಕೊಡಿಸಲಾಗುವುದು. ಈ ಸಂಬಂಧ ಈಗಾಗಲೇ ಸಭೆಯಲ್ಲಿ‌ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ನಗರದ ಟಿ ಚನ್ನಯ್ಯ ರಂಗಮಂದಿರಲ್ಲಿ‌ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ‌ ವೀರಶೈವ ಸಮುದಾಯದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ‌ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ, ಯುಗಮಾನೋತ್ಸವದಲ್ಲಿ ಅವರು ಮಾತನಾಡಿದರು.

ಮಠಗಳ ಸ್ವಾಮೀಜಿಗಳ ಆಶಿರ್ವಾದ ಎಲ್ಲರ ಮೇಲಿದ್ದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ನಂತರ‌ ಉತ್ತಮ ಕೆಲಸ ಸಿಗಬೇಕು. ಮಠದಲ್ಲಿ ಗುರುಗಳು ಇರುವುದರಿಂದಲೇ ಸಂಸ್ಕೃತಿ, ಸಿದ್ಧಾಂತ, ಪದ್ಧತಿಗಳು ಉಳಿದುಕೊಂಡಿವೆ ಎಂದರು.

ADVERTISEMENT

ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ನಮ್ಮ ಸಮುದಾಯವು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿದೆ. ರೇಣುಕಾಚಾರ್ಯ ಹಾಗೂ ಬಸವಣ್ಣ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದು ವಾಡಿಕೆ ಇದೆ. ಕಳೆದ‌ ವರ್ಷಕ್ಕಿಂತ ಈ ವರ್ಷ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ಮೂಡಿಸಿದೆ’ ಎಂದು ಹೇಳಿದರು.

ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭಾರತ ದೇಶ ಪುಣ್ಯ ಭೂಮಿ. ಇಲ್ಲಿನ ಮಣ್ಣಿನಲ್ಲಿ ಸಾವಿರಾರು ಸಂತರು, ಮಹಂತರು, ಪುಣ್ಯ ಪುರುಷರ ಜನ್ಮತಾಳಿದ್ದಾರೆ. ಅಧರ್ಮ ಅಟ್ಟಹಾಸ ಮೆರೆದಾಗ ಒಬ್ಬೊಬ್ಬ ಪುಣ್ಯ ಪುರುಷರು ಹುಟ್ಟಿ ಶಾಂತಿ, ನೆಮ್ಮದಿ ತಂದು ಕೊಟ್ಟಿದ್ದಾರೆ. ಮಾನವನನ್ನು ಮಹದೇವನನ್ನಾಗಿ ಮಾಡಿದ್ದು ರೇಣುಕಾಚಾರ್ಯರು’ ಎಂದು ವಿವರಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಧರ್ಮ, ಜಾತಿ ಎನ್ನದೆ ಸಂಸ್ಕೃತಿ‌, ಧರ್ಮದ ಜಾಗೃತಿ ಹಾಗೂ ಸಮಾಜದ ಏಳಿಗೆಯ ಬಗ್ಗೆ ವಿಚಾರಗಳನ್ನು ತಿಳಿಸುವ ಕೆಲಸವನ್ನು ರೇಣುಕಾಚಾರ್ಯರು ಮಾಡಿದ್ದಾರೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್‌ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಸಮುದಾಯದ ಮುಖಂಡ ವೀರಭದ್ರಸ್ವಾಮಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಹಾಯಕ ನಿರ್ದೇಶಕಿ‌ ಎನ್.ವಿಜಯಲಕ್ಷ್ಮಿ ಸ್ವಾಗತಿಸಿದರು. ಮಾಲೂರು ಗಾಯತ್ರಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್,‌‌ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ಸುರೇಶ್, ಅಖಿಲ ಭಾರತ ವೀರಶೈವ ಮಹಾ ಸಭಾದ ಸಿದ್ದಲಿಂಗ ಒಡೆಯರ್, ಶರಣೆಯರ ಬಳಗದ ಜಿಲ್ಲಾಧ್ಯಕ್ಷೆ‌ ಉಷಾ ಗಂಗಾಧರ್, ಸಮುದಾಯ ಮುಖಂಡರಾದ ರಾಮಸಂದ್ರ ಕುಮಾರ್, ವೀರೇಂದ್ರ ಪಾಟೀಲ್, ಬಿ.ಆರ್.ಎಂ ಚನ್ನಪ್ಪ, ವಿಮಲ ಬೈಲಪ್ಪ ಇದ್ದರು.

ರೇಣುಕಾಚಾರ್ಯರ ಪಲ್ಲಕ್ಕಿ ಉತ್ಸವ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕೋಲಾರ ನಗರದ ಆರಳೇಪೇಟೆಯ ಶ್ರೀಬಸವೇಶ್ವರ ದೇವಾಲಯದಿಂದ ಟಿ.ಚನ್ನಯ್ಯ ರಂಗಮಂದಿರದವರೆಗೆ ‌ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹೊತ್ತ ಪಲ್ಲಕ್ಕಿ ಉತ್ಸವ ನಡೆಯಿತು. ಕಳಸ ಮಂಗಳವಾದ್ಯ ಪೂರ್ಣಕುಂಭ ವೀರಗಾಸೆ ಡೊಳ್ಳು ಕುಣಿತ ಚಂಡಿ ವಾದ್ಯ ನಾಸಿಕ್ ವಾದ್ಯ ಮೆರುಗು ತುಂಬಿತು. ಅರಳೇಪೇಟೆಯ ಶ್ರೀಬಸವೇಶ್ವರ ಸ್ವಾಮಿ ದೇವಾಲಯದಿಂದ ಎಂ.ಜಿ.ರಸ್ತೆ ಪೊಲೀಸ್ ಸ್ಟೇಷನ್ ಮುಂಭಾಗದಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಮೆರವಣಿಗೆ ಸಾಗಿತು. ಮಹಿಳೆಯರು ಕಳಶ ಹೊತ್ತು ಸಾಗಿದರು. ಶ್ರೀಬಸವೇಶ್ವರ ಭಕ್ತ ಮಂಡಳಿ ಹಾಗೂ ಶರಣೆಯರ ಬಳಗ ಪಾಲ್ಗೊಂಡಿತ್ತು.

ರೇಣುಕಾಚಾರ್ಯರು ಯಾವುದೇ ಜಾತಿಗೆ ಸೀಮಿತವಾಗದೆ ಇಡೀ ಮಾನವ ಕುಲದ ಲೋಕಕಲ್ಯಾಣಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಮಾನವೀಯತೆಯ ಸಂದೇಶ ಸಾರಿದ್ದಾರೆ.
- ತೇಜೇಶಲಿಂಗ ಸ್ವಾಮೀಜಿ, ನಾಗಲಾಪುರದ ಮಠ
‌ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಶಾಸಕ ಕೊತ್ತೂರು ಮಂಜುನಾಥ್‌ ಎಂಎಲ್‌ಸಿ ಅನಿಲ್‌ ಕುಮಾರ್‌ ಕೋಮುಲ್‌ ನಿರ್ದೇಶಕ ಚಂಜಿಮಲೆ ರಮೇಶ್‌ ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.