ADVERTISEMENT

ಬಂಗಾರಪೇಟೆ | ಭೂದಾಖಲೆ ನಿರ್ವಹಣೆಗೆ ಸಿಬ್ಬಂದಿ ಕೊರತೆ

ಭೂ ವಿಭಜನೆ, ಆಸ್ತಿ ಹದ್ದಬಸ್ತು, ಭೂಸ್ವಾಧೀನ ಅರ್ಜಿಗಳ ವಿಲೇವಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:08 IST
Last Updated 10 ಅಕ್ಟೋಬರ್ 2025, 5:08 IST
ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ರಾಜಕಾಲುವೆ ಸರ್ವೆ ಮಾಡುತ್ತಿರುವ ಸಿಬ್ಬಂದಿ
ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ರಾಜಕಾಲುವೆ ಸರ್ವೆ ಮಾಡುತ್ತಿರುವ ಸಿಬ್ಬಂದಿ   

ಬಂಗಾರಪೇಟೆ: ತಾಲ್ಲೂಕಿನಲ್ಲಿ ಭೂಮಾಪನ ಮತ್ತು ಭೂದಾಖಲೆಗಳ ನಿರ್ವಹಣೆಗಾಗಿ ಸಿಬ್ಬಂದಿ ಕೊರತೆಯು ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಇದರಿಂದಾಗಿ ಸಾರ್ವಜನಿಕರು ಭೂದಾಖಲೆ ಸೇವೆ ಪಡೆಯಲು ವಿಳಂಬವಾಗುತ್ತಿದೆ. ಹೀಗಾಗಿ ಹೀಗಾಗಿ, ಸರ್ಕಾರವು ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ. 

ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಪೈಕಿ ವಿಶೇಷವಾಗಿ ಭೂಮಾಪಕರು (ಸರ್ವೇಯರ್‌ಗಳು), ಕಿರಿಯ ಎಂಜಿನಿಯರ್‌ಗಳು ಮತ್ತು ಇತರ ತಾಂತ್ರಿಕ ಸಿಬ್ಬಂದಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. ಅನೇಕ ವರ್ಷಗಳಿಂದ ಹೊಸ ನೇಮಕಾತಿ ಪ್ರಕ್ರಿಯೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದು. ಈ ಹುದ್ದೆಗಳು ಖಾಲಿ ಉಳಿಯಲು ಕಾರಣವಾಗಿದೆ. 

ಕಚೇರಿಯಲ್ಲಿರುವ ಸಿಬ್ಬಂದಿಯ ಮೇಲೆ ದೈನಂದಿನ ಕೆಲಸದ ಹೊರೆ ಹೆಚ್ಚುತ್ತಿದೆ. ಭೂಮಿ ವಿಭಜನೆ (ಪೋಡಿ), 11ಇ ನಕ್ಷೆ, ಆಸ್ತಿ ಹದ್ದುಬಸ್ತು ಮತ್ತು ಭೂಸ್ವಾಧೀನ ಪ್ರಕ್ರಿಯೆಗಳ ರೀತಿಯ ಸೇವೆಗಳಿಗೆ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಟ್ಟಲೆ ಕಾಯಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಜಮೀನು ಮಾರಾಟ, ಖರೀದಿ, ಸಾಲ ಪಡೆಯುವುದು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿವೆ. 

ADVERTISEMENT

ಭೂದಾಖಲೆಗಳ ಆಧುನೀಕರಣಕ್ಕೆ ಅಡ್ಡಿಯಾಗುತ್ತಿದೆ. ಡ್ರೋನ್ ಸರ್ವೆ, ಡಿಜಿಟಲ್ ನಕ್ಷೆ ತಯಾರಿಕೆ, ಮತ್ತು ‘ಸ್ವಾಮಿತ್ವ’ ಯೋಜನೆಯಂತಹ ತಾಂತ್ರಿಕ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 

ಭೂದಾಖಲೆಗಳ ನಿರ್ವಹಣೆ ಹಾಗೂ ಭೂಮಾಪನೆ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತವೆ. ಇದರಿಂದ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆಗಳು ದೊರೆಯುತ್ತಿಲ್ಲ. ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾಗರಿಕರು ಕಚೇರಿಗಳಿಗೆ ಅಲೆಯಬೇಕಾಗಿದೆ ಎಂದು ಕಾಮಸಮುದ್ರದ ದರ್ಖಾಸ್ತು ಸಮಿತಿಯ ಮಾಜಿ ಸದಸ್ಯ ಶ್ರೀನಿವಾಸ್ ಹೇಳಿದರು. 

ಡ್ರೋನ್‌ಗಳಂತಹ ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ಕಾರ್ಯಕ್ಕೆ ವೇಗ ನೀಡಲು ಪ್ರಯತ್ನಿಸಲಾಗುತ್ತಿದೆ. ಇದು ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್ ತಿಳಿಸಿದರು. 

ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ರಾಜು ಕಾಲುವೆಯನ್ನು ಸರ್ವೆ ಮಾಡುತ್ತಿರುವ ಅಧಿಕಾರಿಗಳು

ಕೆಲಸಗಳು ವಿಳಂಬವಾಗುವುದರಿಂದ ಕೆಲ ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಭೂ ಮಾಪಕರ ಕೊರತೆಯು ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ. 

- ಚಂದ್ರಶೇಖರ್ ಎಸ್.ಜಿ. ಕೋಟೆ ಗ್ರಾ. ಪಂ. ಮಾಜಿ ಸದಸ್ಯ

ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಭೂಸ್ವಾಧೀನ ರಸ್ತೆ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಭೂಮಾಪನ ಅತ್ಯಗತ್ಯ. ಸಿಬ್ಬಂದಿ ಕೊರತೆಯಿಂದ ಈ ಯೋಜನೆಗಳು ವಿಳಂಬವಾಗುತ್ತವೆ.

-ರಾಮಚಂದ್ರಪ್ಪ ನಿವೃತ್ತ ತಹಶೀಲ್ದಾರ್

ಸಾರ್ವಜನಿಕರ ಕೆಲಸಗಳನ್ನು ತ್ವರಿತಗೊಳಿಸಲು ಪರವಾನಗಿ ಪಡೆದ ಖಾಸಗಿ ಭೂಮಾಪಕರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇವರು ನಿಗದಿತ ಶುಲ್ಕ ಪಡೆದು ಭೂಮಾಪನ ಸೇವೆ ಒದಗಿಸಲಿದ್ದಾರೆ

-ಕೆ.ಎನ್. ಸುಜಾತ ತಹಶೀಲ್ದಾರ್ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.