ADVERTISEMENT

ಎಪಿಎಂಸಿಗೆ ಜಮೀನು: ಜಿಲ್ಲಾಧಿಕಾರಿ ಭರವಸೆ

ಚಲುವನಹಳ್ಳಿ ಬಳಿಯ ಅರಣ್ಯ ಇಲಾಖೆ ಜಾಗದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:39 IST
Last Updated 13 ಡಿಸೆಂಬರ್ 2019, 8:39 IST
ಕೋಲಾರ ಎಪಿಎಂಸಿ ಸ್ಥಳಾಂತರಕ್ಕೆ ಗುರುತಿಸಿರುವ ಚಲುವನಹಳ್ಳಿ ಬಳಿಯ ಅರಣ್ಯ ಇಲಾಖೆ ಜಾಗವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಗುರುವಾರ ಪರಿಶೀಲಿಸಿದರು.
ಕೋಲಾರ ಎಪಿಎಂಸಿ ಸ್ಥಳಾಂತರಕ್ಕೆ ಗುರುತಿಸಿರುವ ಚಲುವನಹಳ್ಳಿ ಬಳಿಯ ಅರಣ್ಯ ಇಲಾಖೆ ಜಾಗವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಗುರುವಾರ ಪರಿಶೀಲಿಸಿದರು.   

ಕೋಲಾರ: ‘ಟೊಮೆಟೊ ವಹಿವಾಟಿನಲ್ಲಿ ಏಷ್ಯಾ ಖಂಡದಲ್ಲೇ ದ್ವಿತೀಯ ಸ್ಥಾನದಲ್ಲಿರುವ ಕೋಲಾರ ಎಪಿಎಂಸಿ ಸ್ಥಳಾಂತರಕ್ಕೆ ಸದ್ಯದಲ್ಲೇ ಜಮೀನು ಒದಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭರವಸೆ ನೀಡಿದರು.

ಎಪಿಎಂಸಿ ಸ್ಥಳಾಂತರಕ್ಕೆ ತಾಲ್ಲೂಕಿನ ಚಲುವನಹಳ್ಳಿ ಬಳಿ ಗುರುತಿಸಲಾಗಿರುವ ಅರಣ್ಯ ಇಲಾಖೆಯ 30 ಎಕರೆ ಜಮೀನನ್ನು ಗುರುವಾರ ಪರಿಶೀಲಿಸಿ ಮಾತನಾಡಿ, ‘ಕೋಲಾರ ಎಪಿಎಂಸಿಯನ್ನು ಪ್ರಥಮ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಎಪಿಎಂಸಿ ದಿನೇ ದಿನೇ ಬೆಳೆಯುತ್ತಿದ್ದು, ವಹಿವಾಟು ಜೋರಾಗಿದೆ. ಟೊಮೆಟೊ ವಹಿವಾಟು ಹಿಂದಿಗಿಂತ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇಲ್ಲಿನ ಎಪಿಎಂಸಿಯಿಂದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಾಕಿಸ್ತಾನ, ಬಾಂಗ್ಲಾ ದೇಶಕ್ಕೆ ಟೊಮೆಟೊ ರಫ್ತಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಎಪಿಎಂಸಿ ಸ್ಥಳಾಂತರಕ್ಕೆ ಹೆಚ್ಚಿನ ಭೂಮಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚಲುವನಹಳ್ಳಿ ಬಳಿಯ ಅರಣ್ಯ ಇಲಾಖೆಗೆ ಸೇರಿದ 30 ಎಕರೆ ಜಮೀನನ್ನು ಎಪಿಎಂಸಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಜಮೀನಿನ ಬದಲಿಗೆ ಅರಣ್ಯ ಇಲಾಖೆಗೆ ಕಂದಾಯ ಇಲಾಖೆ ಭೂಮಿಯನ್ನು ಕೊಡಲಾಗುತ್ತದೆ’ ಎಂದು ವಿವರಿಸಿದರು.

‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಜಾಗದಲ್ಲಿ ಮಾರುಕಟ್ಟೆ ಕಾರ್ಯಾರಂಭ ಮಾಡಿದರೆ ಸಾರಿಗೆ ವ್ಯವಸ್ಥೆ ಸುಲಭವಾಗಿರುತ್ತದೆ. ಈ ಕಾರಣಕ್ಕೆ ಚಲುವನಹಳ್ಳಿ ಬಳಿಯ ಜಮೀನು ಪಡೆದುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ರೈತರು ಸ್ವಾಭಿಮಾನಿಗಳು: ‘ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗದ ಕಾರಣ ಅಂತರ್ಜಲದ ಕೊರತೆ ಇದೆ. ಆದರೂ ಇಲ್ಲಿನ ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ನೀರಿನ ಕೊರತೆ ನಡುವೆಯೂ ಇಡೀ ದೇಶಕ್ಕೆ ತರಕಾರಿ ಬೆಳೆದು ಕೊಡುತ್ತಾರೆ. ಜಿಲ್ಲೆಯ ರೈತರು ಶ್ರಮ ಜೀವಿಗಳು ಮತ್ತು ಸ್ವಾಭಿಮಾನಿಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಗೆ ಈಗಾಗಲೇ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿದ್ದು, 41 ಕೆರೆ ತುಂಬಿವೆ. ಇನ್ನೂ 250 ಕೆರೆ ತುಂಬಿಸುವ ಗುರಿಯಿದೆ. ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾದರೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತವೆ. ಎತ್ತಿನ ಹೊಳೆ ಯೋಜನೆಯಿಂದಲೂ ನೀರು ಬರುವುದರಿಂದ ಜಿಲ್ಲೆಯ ಪರಿಸ್ಥಿತಿ ಬದಲಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮಸ್ಯೆ ವಿವರಿಸಿದ್ದೇವೆ: ‘ಎಪಿಎಂಸಿಯಲ್ಲಿ ಜಾಗದ ಸಮಸ್ಯೆ ಗಂಭೀರವಾಗಿದೆ. ಟೊಮೆಟೊ ಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಅನುಕೂಲ ಆಗುತ್ತದೆ. ಚಲುವನಹಳ್ಳಿ ಬಳಿಯ ಜಮೀನು ಪಡೆಯಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರನ್ನು ಭೇಟಿಯಾಗಿ ಜಾಗದ ಸಮಸ್ಯೆ ಬಗ್ಗೆ ವಿವರಿಸಿದ್ದೇವೆ’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್‌ ಮಾಹಿತಿ ನೀಡಿದರು.

ತಹಶೀಲ್ದಾರ್ ಶೋಬಿತಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ಬಾಬು, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ಟೊಮೆಟೊ ಮಂಡಿ ಮಾಲೀಕರಾದ ನಾರಾಯಣಸ್ವಾಮಿ, ಶ್ರೀನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.