ADVERTISEMENT

ಪ್ರತಿಪಕ್ಷ ನಾಯಕನ ಸ್ಥಾನ: ಸಿದ್ದರಾಮಯ್ಯ ಸಮರ್ಥರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 12:28 IST
Last Updated 3 ಆಗಸ್ಟ್ 2019, 12:28 IST

ಕೋಲಾರ: ‘ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನನಗಿಂತಲೂ ಸಮರ್ಥರಿದ್ದಾರೆ. ಆ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಅತ್ಯಂತ ಯೋಗ್ಯ ವ್ಯಕ್ತಿ’ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್‌ ಹೇಳಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಎಲ್ಲವೂ ಕೇವಲ ಊಹಾಪೋಹ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ’ ಎಂದರು.

‘ಪುನಃ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದೇನೆ. ನಾನು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ. ಪಕ್ಷ ವಹಿಸಿದ ಕೆಲಸ ನಿರ್ವಹಿಸುವುದಷ್ಟೇ ನನ್ನ ಜವಾಬ್ದಾರಿ. ಗುಣಕ್ಕೆ ಮತ್ಸರ ಇರಬಾರದು. ಪಕ್ಷ ಬಲವರ್ಧನೆಗೆ ಹಾಗೂ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿದ್ದರೆ ಸಿದ್ದರಾಮಯ್ಯ ಅವರೇ ಸಮರ್ಥರು.ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಹೈಕಮಾಂಡ್ ಪಕ್ಷಕ್ಕೆ ಏನು ಒಳ್ಳೆಯದು ಎನಿಸುತ್ತದೆಯೋ ಆ ತೀರ್ಮಾನ ಕೈಗೊಳ್ಳುತ್ತದೆ’ ಎಂದು ನುಡಿದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ಸಂವಿಧಾನಬದ್ಧವಾಗಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಅಧಿಕಾರ ಪ್ರಶ್ನಿಸಬಾರದು. ಅವರಿಗೆ ಏನು ಒಳ್ಳೆಯದು ಅನಿಸುತ್ತದೆಯೋ ಅದನ್ನು ಮಾಡಲಿ, ಅದಕ್ಕೆ ಅಡ್ಡಿಪಡಿಸುವುದೇನಿದೆ? ಮುಖ್ಯಮಂತ್ರಿ ಆಗಿರುವುದರಿಂದ ವರ್ಗಾವಣೆ ಮಾಡುವ ಅಧಿಕಾರ ಅವರಿಗಿದೆ, ಮಾಡಲಿ. ಸರಿನೋ ತಪ್ಪೋ ಎಂಬುದನ್ನು ಜನ ತೀರ್ಮಾನಿಸುತ್ತಾರೆ. ನಾವ್ಯಾಕೆ ಆತುರ ಬಿದ್ದು ಮಾತನಾಡಬೇಕು’ ಎಂದರು.

‘ಬಿಜೆಪಿ ಸರ್ಕಾರಕ್ಕೆ ಟಿಪ್ಪು ಜಯಂತಿ ಆಚರಿಸಲು ಇಷ್ಟವಿಲ್ಲ. ಹೀಗಾಗಿ ಜಯಂತಿ ರದ್ದುಪಡಿಸಿದ್ದಾರೆಯೇ ವಿನಃ ಇದು ಜನರ ತೀರ್ಮಾನವಲ್ಲ. ಇಷ್ಟಬಂದಂತೆ ಮಾಡುವುದು ಜನಪರ ಸರ್ಕಾರದ ಲಕ್ಷಣವೇ? ಸಮಯ ಬಂದಾಗ ಜನರೇ ಇದಕ್ಕೆ ಉತ್ತರ ನೀಡುತ್ತಾರೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.