ADVERTISEMENT

ನಾಯಕತ್ವ ಬದಲಾವಣೆ ಊಹಾಪೋಹ; ಸಚಿವ ನಾಗೇಶ್‌

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 15:19 IST
Last Updated 29 ನವೆಂಬರ್ 2020, 15:19 IST
ಎಚ್‌.ನಾಗೇಶ್‌
ಎಚ್‌.ನಾಗೇಶ್‌   

ಕೋಲಾರ: ‘ನಾಯಕತ್ವ ಬದಲಾವಣೆ ವಿಷಯ ಊಹಾಪೋಹ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯವಾಗಿ ತುಂಬಾ ಅನುಭವಿ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಡಿಯೂರಪ್ಪ ಅವರು ಪ್ರವಾಹ, ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದರೆ ರಾಜ್ಯಕ್ಕೆ ಮತ್ತು ಜನರಿಗೆ ಒಳ್ಳೆಯದಾಗುತ್ತದೆ’ ಎಂದರು.

‘ಸಚಿವ ಸಂಪುಟ ವಿಸ್ತರಣೆ ಕೂಗು ಬಲವಾಗಿದೆ. ಆದರೆ, ನಿಜಾಂಶ ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ವರಿಷ್ಠರಿಗೆ ಸಂಭವನೀಯರ ಪಟ್ಟಿ ಕೊಟ್ಟಿದ್ದಾರೆ. ವರಿಷ್ಠರು ಮೂರ್ನಾಲ್ಕು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಆದರೆ, 10 ದಿನವಾದರೂ ನಿರ್ಧಾರ ಹೇಳಿಲ್ಲ. ಸದ್ಯದಲ್ಲೇ ಒಪ್ಪಿಗೆ ಸೂಚಿಸುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸದ್ಯದಲ್ಲೇ ಘೋಷಣೆಯಾಗಲಿದೆ. ಜತೆಗೆ ಗ್ರಾ.ಪಂ ಚುನಾವಣೆ ಸಹ ಘೋಷಣೆಯಾಗುತ್ತದೆ. ವಿಧಾನ ಮಂಡಲ ಅಧಿವೇಶನ ಇರುವುದರಿಂದ ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ’ ಎಂದು ತಿಳಿಸಿದರು.

‘ಮಿತ್ರಮಂಡಳಿಯ 17 ಶಾಸಕರೂ ಒಟ್ಟಿಗೆ ಇದ್ದೇವೆ. ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಕೊಡುವಂತೆ ರಮೇಶ್ ಜಾರಕಿಹೊಳಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸರ್ಕಾರ ರಚನೆಯಲ್ಲಿ ಯೋಗೇಶ್ವರ್‌ರ ಪಾತ್ರ ಹೆಚ್ಚಿದೆ ಎಂದು ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಇದನ್ನು ವರಿಷ್ಠರು ಎಷ್ಟರ ಮಟ್ಟಿಗೆ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕು’ ಎಂದು ಸ್ಪಷ್ಟಪಡಿಸಿದರು.

ಆಕಾಂಕ್ಷಿಗಳ ಹೆಚ್ಚು: ‘ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಎಲ್ಲರನ್ನೂ ತೃಪ್ತಿಪಡಿಸಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಮತ್ತು ವರಿಷ್ಠರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್‌ ತುಂಬಾ ಒಳ್ಳೆಯವರು ಮತ್ತು ಶ್ರಮ ಜೀವಿ. ಚಿಕ್ಕ ವಯಸ್ಸಿನಲ್ಲೇ ರಾಜಕೀಯವಾಗಿ ಉನ್ನತ ಸ್ಥಾನಕೇರಿದ ಅವರು ಎಲ್ಲರ ಜತೆ ಆತ್ಮೀಯರಾಗಿದ್ದಾರೆ. ಅವರು ಸಾಯುವಂತಹ ತಪ್ಪು ಮಾಡಿಲ್ಲ. ಕಷ್ಟಗಳು ಸಹಜ. ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ದಿಟ್ಟವಾಗಿ ಪರಿಸ್ಥಿತಿ ನಿಭಾಯಿಸಬೇಕು. ಸಂತೋಷ್‌ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.