ADVERTISEMENT

ಸಮಾನತೆ ಮೂಲ ಮಂತ್ರವಾಗಲಿ: ಸಿ.ಆರ್‌.ಅಶೋಕ್

ಗಾಂಧಿ ಜಯಂತಿಯಲ್ಲಿ ಹರಟಿ ಗ್ರಾ.ಪಂ ಆಡಳಿತಾಧಿಕಾರಿ ಅಶೋಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 15:04 IST
Last Updated 2 ಅಕ್ಟೋಬರ್ 2020, 15:04 IST
ಕೋಲಾರ ತಾಲ್ಲೂಕಿನ ಹರಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಜಲಗಾರರ ಪಾದ ತೊಳೆದು ಸನ್ಮಾನ ಮಾಡಲಾಯಿತು.
ಕೋಲಾರ ತಾಲ್ಲೂಕಿನ ಹರಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಜಲಗಾರರ ಪಾದ ತೊಳೆದು ಸನ್ಮಾನ ಮಾಡಲಾಯಿತು.   

ಕೋಲಾರ: ‘ಮಹಾತ್ಮ ಗಾಂಧೀಜಿಯ ಕನಸು ನನಸಾಗಬೇಕು. ಸಮಾನತೆಯು ಮೂಲ ಮಂತ್ರವಾಗಬೇಕು. ಈ ದಿಸೆಯಲ್ಲಿ ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆಯೇ ಶ್ರೇಷ್ಠ’ ಎಂದು ತಾಲ್ಲೂಕಿನ ಹರಟಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಿ.ಆರ್‌.ಅಶೋಕ್ ತಿಳಿಸಿದರು.

ಹರಟಿ ಗ್ರಾ.ಪಂನಲ್ಲಿ ಶುಕ್ರವಾರ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿ, ‘ವ್ಯಕ್ತಿ ಸಮಾನತೆ ಮುಖ್ಯ. ಪ್ರತಿಯೊಬ್ಬರನ್ನು ಗೌರವಿಸುವ ಮತ್ತು ಪ್ರೀತಿಸುವ ಮನೋಭಾವ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಗಾಂಧೀಜಿಯು ದೇಶವನ್ನು ಬೆಳಕಿನೆಡೆಗೆ ಕೊಂಡೊಯ್ದ ಆದರ್ಶ ಪುರುಷರಾಗಿದ್ದಾರೆ. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಸ್ವಾವಲಂಬನೆಗೆ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಅತ್ಯಗತ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ, ಪ್ರಾಮಾಣಿಕತೆ, ದೇಶಪ್ರೇಮ ರೂಢಿಸಿಕೊಂಡರೆ ಸತ್ಪ್ರಜೆಗಳಾಗಬಹುದು. ಭಾರತದ ಶೇ 72ರಷ್ಟು ಭಾಗವು ಗ್ರಾಮೀಣ ಪ್ರದೇಶದಿಂದ ಕೂಡಿದೆ. ಗ್ರಾಮಗಳ ಸರ್ವತ್ತೋಮುಖ ಅಭಿವೃದ್ಧಿಯಾದರೆ ಜನರ ಬದುಕು ಹಸನಾಗುತ್ತದೆ’ ಎಂದು ಪಿಡಿಒ ಡಿ.ನಾಗರಾಜ್ ಹೇಳಿದರು.

‘ದೇಶದ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಜನ ಆರ್ಥಿಕವಾಗಿ ಸಬಲರಾದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಗಾಂಧೀಜಿಯು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ಗ್ರಾಮಗಳ ಉದ್ಧಾರಕ್ಕೆ ಶ್ರಮಿಸಿದರು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ತಿಳಿಸಿದರು.

ಜಲಗಾರರ ಪಾದ ತೊಳೆದು ಸನ್ಮಾನ ಮಾಡಲಾಯಿತು. ಗ್ರಾ.ಪಂ ಮಾಜಿ ಸದಸ್ಯರು, ಗ್ರಾಮದ ಮುಖಂಡರು ಪಾಲ್ಗೊಂಡರು.

ಸರಳ ಆಚರಣೆ: ತಾಲ್ಲೂಕಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

‘ಶರವೇಗದಲ್ಲಿ ಮುನ್ನುಗ್ಗುತ್ತಿರುವ ಯುವ ಪೀಳಿಗೆಯು ದುರಾಸೆ, ಅಸತ್ಯ, ಭ್ರಷ್ಟಾಚಾರ, ವಂಚನೆಯ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದೆ. ಜನರು ಸ್ವೇಚ್ಛಾಚಾರದ ಮಾಯಜಿಂಕೆಯ ಬೆನ್ನತ್ತಿದ್ದಾರೆ. ಸಮಕಾಲೀನ ಸಮಾಜದ ನೂರಾರು ಸಮಸ್ಯೆಗಳಿಗೆ ಗಾಂಧಿ ಮಾರ್ಗ ಪರಿಹಾರ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸೊಣ್ಣೇಗೌಡ ಅಭಿಪ್ರಾಯಪಟ್ಟರು.

‘ಗಾಂಧೀಜಿಯು ದೇಶದ ಒಳಿತಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಅವರ ತತ್ವಾದರ್ಶಗಳು ಜಗತ್ತಿನ ಕೋಟ್ಯಂತರ ಜನರ ಬದುಕಿಗೆ ಆಶಾಕಿರಣವಾಗಿ ಕಾಣುತ್ತಿವೆ. ಗಾಂಧೀಜಿಯ ಸ್ವಚ್ಛ ಭಾರತದ ಕನಸನ್ನು ಶಾಲೆಗಳಲ್ಲಿ ಸಾಕಾರಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಲೆ ಪ್ರಾಂಶುಪಾಲ ಸುಬ್ರಮಣ್ಯಂ, ಶಿಕ್ಷಕರಾದ ಭಾರತಿ, ಹಂಸವೇಣಿ, ಸುಜಾತಾ, ಸುವರ್ಣ ಕುಮಾರಿ, ಸೌಮ್ಯ, ಸುಧಾ, ಶಿವರತ್ನಮ್ಮ, ಶಿವಪ್ರಸಾದ್, ರವಿಕುಮಾರ್, ಶಿವಶಂಕರ್‌ ರೆಡ್ಡಿ, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.