ADVERTISEMENT

ಜನರ ಬದುಕಿನ ಭಾಷೆಯಾಗಲಿ ಕನ್ನಡ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 14:53 IST
Last Updated 2 ನವೆಂಬರ್ 2020, 14:53 IST
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳದ ಸಹಯೋಗದಲ್ಲಿ ಕೋಲಾರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳದ ಸಹಯೋಗದಲ್ಲಿ ಕೋಲಾರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.   

ಕೋಲಾರ: ‘ತಿಂಗಳಿಗೊಂದು ಕನ್ನಡ ಪುಸ್ತಕ ಖರೀದಿಸಿ ಓದುವ ಮೂಲಕ ಕನ್ನಡದ ಅಸ್ಮಿತೆ ಕಾಪಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

ಶಿಕ್ಷಣ ಇಲಾಖೆ ಮತ್ತು ಭಾರತ ಸೇವಾ ದಳದ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಪ್ರತಿಯೊಬ್ಬರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ ಜಲದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಾಗ ಮಾತ್ರ ಕನ್ನಡದ ಅಸ್ಮಿತೆ ಕಾಯ್ದುಕೊಳ್ಳಲು ಸಾಧ್ಯ’ ಎಂದರು.

‘ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲಘಟ್ಟದವರೆಗೂ ಎಲ್ಲಾ ಕಾಲಕ್ಕೆ ಎಲ್ಲಾ ತಂತ್ರಜ್ಞಾನಕ್ಕೂ ಕನ್ನಡ ಸಲ್ಲುತ್ತದೆ. ಕನ್ನಡ ಭಾಷೆ ಬಗ್ಗೆ ಕೀಳರಿಮೆ ತೊರೆದು ನಿತ್ಯವೂ ಭಾಷೆ ಬಳಸಬೇಕು. ಕನ್ನಡವು ಜನರ ಬದುಕಿನ ಭಾಷೆಯಾಗಬೇಕು’ ಎಂದು ಆಶಿಸಿದರು.

ADVERTISEMENT

‘ಕನ್ನಡ ಶಾಲೆಗಳ ಅವನತಿಯು ಭವಿಷ್ಯದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕನ್ನಡ ಭಾಷೆ ಉಳಿಯಬೇಕಾದರೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಬೇಕು. ಇದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು’ ಎಂದು ಭಾರತ ಸೇವಾ ದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.

ಕನ್ನಡ ಗೀತೆ ಗಾಯನ, ನಾಡ ಧ್ವಜಾರೋಹಣ, ನಾಡಗೀತೆ, ರಾಷ್ಟ್ರಗೀತೆ ಗಾಯನ ನಡೆಯಿತು. ಭಾರತ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರೋಟರಿ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ಸಂಘಟಕ ದಾನೇಶ್, ಶಿಕ್ಷಕಿ ಸುಜಾತಾ, ಬಿಇಒ ಕಚೇರಿ ಅಧೀಕ್ಷಕ ಗಿರೀಶ್, ವ್ಯವಸ್ಥಾಪಕ ಮುನಿಸ್ವಾಮಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.