ಕೋಲಾರ: ‘ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ಘನತೆ ಹೆಚ್ಚಿಸಿಕೊಂಡ ಸಾಹಿತ್ಯ ರಚಿಸಿದ ಕವಿ ಮತ್ತು ಲೇಖಕರನ್ನು ಸಮಾಜಕ್ಕೆ ಪರಿಚಯಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ಮನ್ವಂತರ ಪ್ರಕಾಶನ ಮತ್ತು ಮನ್ವಂತರ ಜನ ಸೇವಾ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕವಿ ಹಾಗೂ ಲೇಖಕ ಆರ್.ಚೌಡರೆಡ್ಡಿ ಅವರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಡಿವಿಜಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಂತಹ ದಿಗ್ಗಜರು ಜನ್ಮ ತಾಳಿದ್ದಾರೆ. ಗಡಿ ಜಿಲ್ಲೆಯಲ್ಲಿ ವಿಮರ್ಶೆಗಳೆನ್ನಲ್ಲಾ ಮೀರಿ ಓದುಗರ ಪ್ರೀತಿ ಗಳಿಸಿ ಕವಿಯಾಗಬೇಕು. ಸಾಹಿತ್ಯ ಸಮಾಜಕ್ಕೆ ದಾರಿ ದೀಪವಾಗಬೇಕು. ಮನುಷ್ಯ ವೇಗದ ವಿಮರ್ಶೆ ಮಾಡಿ ನೋಡುವ ಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಸಾಹಿತಿಯನ್ನು ಗೌರವಿಸುವ ಕೆಲಸ ಮಾಡಬೇಕು’ ಎಂದರು.
‘ಸಾಹಿತ್ಯ ಮತ್ತು ಸಂಗೀತ ನಿರ್ಮಲ. ಇವುಗಳನ್ನು ಆಸ್ವಾದಿಸಲು ಮನಸ್ಸು ಸರಿಯಿರಬೇಕು. ಕಾಳಿದಾಸ ಇಂಗ್ಲೆಂಡ್‌ನಲ್ಲಿ ಹುಟ್ಟಿದ್ದರೆ ವಿಶ್ವ ಮಾನ್ಯರಾಗುತ್ತಿದ್ದರು. ಅವರ ಸಾಹಿತ್ಯಕ್ಕೆ ಸಾಟಿಯೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.
‘ಮಾಧ್ಯಮಗಳು ದೊಂಬಿ, ಗಲಾಟೆಗೆ ನೀಡುವಷ್ಟು ಮಾನ್ಯತೆಯನ್ನು ಸಾಹಿತ್ಯಕ್ಕೆ ನೀಡುತ್ತಿಲ್ಲ. ಕವಿ ಚೌಡರೆಡ್ಡಿ ಅವರು ಗ್ರಾಮೀಣ ಕೆರೆ, ಕಣಿ, ಬೆಳೆ, ಕೃಷಿಯ ಜನಪದ ಸೊಗಡನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಗೋವಿಂದಗೌಡ ಸ್ಮರಿಸಿದರು.
‘ಅರಸ ಮರಣಿಸಿದರೆ ತಾರೆಯೊಂದು ಉರುಳಿತು ಎನ್ನುತ್ತಾರೆ. ಆದರೆ, ಕವಿಯೊಬ್ಬ ಮರಣಿಸಿದರೆ ಆತನ ಸಾಹಿತ್ಯ ಜನರ ನಾಲಿಗೆಯಲ್ಲಿ ಶಾಶ್ವತವಾಗಿ ಉಳಿಯುವ ಮೂಲಕ ತಾರೆಯೊಂದು ಗಗನ ಸೇರಿತು ಎನ್ನುತ್ತೇವೆ. ಹಳ್ಳಿಗನಿಗೆ ಹೃದಯದಲ್ಲಿ ಬುದ್ಧಿಯಿದ್ದರೆ ವಿಚಾರವಾದಿಗೆ ತಲೆಯಲ್ಲಿ ಬುದ್ಧಿ ಇರುತ್ತದೆ. ಸೃಜನಶೀಲತೆ ಕಾವ್ಯದಲ್ಲಲ್ಲ ಅದನ್ನು ಹೊರ ತೆಗೆಯುವನಲ್ಲಿ ಇರುತ್ತದೆ’ ಎಂದು ತಿಳಿಸಿದರು.
ಕಾವ್ಯದ ಶಿಶು ಬೆಳೆಸಿ: ‘ಕಾವ್ಯದಲ್ಲಿ ಸೌಂದರ್ಯ ತರುವ, ಶಬ್ದಗಳಿಗೆ ನಾದ ತುಂಬುವ ಕೆಲವೇ ಸಮಕಾಲೀನ ಕವಿಗಳಲ್ಲಿ ಚೌಡರೆಡ್ಡಿ ಒಬ್ಬರು. ಜನರ ನಾಲಿಗೆಯಲ್ಲಿ ಕವಿ ಬದುಕಿರುತ್ತಾನೆ ಎಂಬ ಮಾತಿಗೆ ಅರ್ಥವಾದವರು ಚೌಡರೆಡ್ಡಿ. ಕವಿತೆಯಿಂದ ಕವಿತೆಗೆ ಏರಬೇಕು, ಶೂನ್ಯಕ್ಕಲ್ಲ. ಕವಿಗಳು ಕಾವ್ಯದ ಶಿಶು ಬೆಳೆಸಿ ಸಮಾಜಕ್ಕೆ ನೀಡಲಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಆಶಿಸಿದರು.
ಚೌಡರೆಡ್ಡಿ ದಂಪತಿಯನ್ನು ಗೌರವಿಸಲಾಯಿತು. ಗಾಯಕ ನರಸಿಂಹಮೂರ್ತಿ ಮತ್ತು ತಂಡದಿಂದ ಚೌಡರೆಡ್ಡಿ ವಿರಚಿತ ಗೀತೆಗಳ ಗಾಯನ ನಡೆಯಿತು. ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ್, ಸಾಹಿತಿಗಳಾದ ಮಾಯಾ ಬಾಲಚಂದ್ರ, ಸ.ರಘುನಾಥ್, ಶಿಕ್ಷಣ ತಜ್ಞ ಸಿ.ಬೈರಪ್ಪ, ಮನ್ವಂತರ ಜನಸೇವಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಗೀತಾ, ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಸುಬ್ಬರಾಮಯ್ಯ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.