ADVERTISEMENT

ಉಸ್ತುವಾರಿ ಸಚಿವರು ಆಡಳಿತದಲ್ಲಿ ಸುಧಾರಣೆ ತರಲಿ

ಧ್ವಜಾರೋಹಣಕ್ಕೆ ಸೀಮಿತವಾಗಬೇಡಿ: ಜಿಲ್ಲಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷ ಸುದರ್ಶನ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 14:42 IST
Last Updated 26 ಜನವರಿ 2022, 14:42 IST
ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಕೋಲಾರದಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದ ವಿ.ಆರ್‌.ಸುದರ್ಶನ್‌ ಅವರನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು
ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಕೋಲಾರದಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದ ವಿ.ಆರ್‌.ಸುದರ್ಶನ್‌ ಅವರನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು   

ಕೋಲಾರ: ‘ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷ ವಿ.ಆರ್‌.ಸುದರ್ಶನ್ ಒತ್ತಾಯಿಸಿದರು.

ಇಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಕಾರ್ಯೋನ್ಮುಖರಾಗಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿಪಕ್ಷಗಳ ಸಲಹೆ ಪಡೆದು ಅಭಿವೃದ್ಧಿಗೆ ಒತ್ತು ಕೊಡಬೇಕು’ ಎಂದರು.

‘ದೇಶದ ಸ್ವಾತಂತ್ರ್ಯ ಚಳವಳಿಯ ಮೊದಲಿನಿಂದಲೂ ಸೌಹಾರ್ದತೆ, ಸಹಬಾಳ್ವೆ, ಸಹೋದರತ್ವ ಸ್ಥಾಪಿಸಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ದೇಶದಲ್ಲಿ ಮಹನೀಯರ ಸೇವೆ ಗುರುತಿಸುವ ಕೆಲಸ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

ADVERTISEMENT

‘ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ಮನುಷ್ಯನ ತ್ಯಾಗ ಮನೋಭಾವ ಹೆಚ್ಚಾಗಬೇಕಿದೆ. ಬದಲಾವಣೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರು, ಕಾರ್ಮಿಕರು, ಮಹಿಳೆಯರು, ಕೃಷಿ ಕೂಲಿಕಾರರು ಸೇರಿದಂತೆ ಪ್ರತಿಯೊಬ್ಬ ನಾಗರಿಕನ ಪ್ರಗತಿಗೆ ಕೊಡುಗೆ ನೀಡಿದ್ದೇವೆ, ಭಾರತೀಯರಾಗಿ ನಾವೆಲ್ಲಾ ಅದನ್ನು ಸ್ಮರಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳ ಕೊಡುಗೆ ಅಪಾರ. ಅವರ ಹಾಕಿದ ಅಡಿಪಾಯದಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಉತ್ತಮ ಭವಿಷ್ಯವಿದ್ದು, ಜನ ಬದಲಾವಣೆ ಬಯಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಸಹಕಾರ ಮುಖ್ಯ: ‘ಕಾಂಗ್ರೆಸ್ ಜನಪರವಾಗಿದ್ದು, ಬದಲಾವಣೆಗೆ ಧ್ವನಿಯಾಗಿ ಮತ್ತು ಜನರ ಹಿತ ಕಾಪಾಡಲು ಕ್ರಿಯಾಶೀಲವಾಗಿ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರ ಸಹಕಾರ ಮುಖ್ಯ. ರಾಜ್ಯದಲ್ಲಿ ದೇವರಾಜ ಅರಸು ಆದಿಯಿಂದ ಸಿದ್ದರಾಮಯ್ಯ ಅವರ ಕಾಲದವರೆಗೂ ಜನಪರ ಆಡಳಿತ ನೀಡಿರುವುದು ಜನರ ಮನಸ್ಸಿನಲ್ಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಕೆಲಸ ಮಾಡುತ್ತೇವೆ’ ಎಂದು ನುಡಿದರು.

‘ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಪ್ರತಿ ಕಾರ್ಯಕರ್ತರು ಸದಸ್ಯತ್ವ ಪಡೆಯುವ ಮೂಲಕ ಪಕ್ಷದ ಸಂಘಟನಾ ಶಕ್ತಿಹೆಚ್ಚಿಸಬೇಕು. ಜಿಲ್ಲೆಯ ಜನರ ವಿಚಾರವಾಗಿ ಪಕ್ಷಕ್ಕೆ ನಿಷ್ಠರಾಗಿ ಮತ್ತು ಪಕ್ಷದ ಸಂವಿಧಾನಕ್ಕೆ ಬದ್ಧವಾಗಿ ಕ್ರೀಡಾ ಮನೋಭಾವದಿಂದ ಸಂಘಟಿತರಾಗಿ ಪಕ್ಷ ಬೆಳೆಸುವ ಮೂಲಕ ಅಧಿಕಾರಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

ಭದ್ರ ನೆಲೆ: ‘ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಭದ್ರ ನೆಲೆಯಿದ್ದು, ಎದನ್ನು ಉಳಿಸಿಕೊಳ್ಳಲು ಸುದರ್ಶನ್ ಅಂತಹವರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿರುವುದು ಉತ್ತಮ ಬೆಳವಣಿಗೆ. ಅವರ ನಾಯಕತ್ವದಲ್ಲಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು' ಎಂದು ಮಾಜಿ ಸಚಿವ ನಿಸಾರ್ ಅಹಮ್ಮದ್ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಕಿಸಾನ್ ಖೇತ್‌ಘಟಕದ ಅಧ್ಯಕ್ಷ ಶ್ರೀನಿವಾಸ್, ಮೈಸೂರು ಮಿನರಲ್ಸ್ ಮಾಜಿ ನಿರ್ದೇಶಕ ಆರ್.ಕಿಶೋರ್‌ಕುಮಾರ್‌, ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ಮಂಜುನಾಥ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಕಾರ್ಮಿಕ ಘಟಕದ ಅಧ್ಯಕ್ಷ ಯಲ್ಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.