ADVERTISEMENT

ಕೋಲಾರ: ವಿಶ್ವಕರ್ಮ ಸಮಾಜ ಮುಖ್ಯವಾಹಿನಿಗೆ ಬರಲಿ

ಮಕ್ಕಳಿಗೆ ಶಿಕ್ಷಣ ನೀಡಿ: ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 14:43 IST
Last Updated 17 ಸೆಪ್ಟೆಂಬರ್ 2021, 14:43 IST
ಕೋಲಾರದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿಶ್ವಕರ್ಮ ಸಮುದಾಯದ ಮುಖಂಡರು ಪಾಲ್ಗೊಂಡರು
ಕೋಲಾರದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿಶ್ವಕರ್ಮ ಸಮುದಾಯದ ಮುಖಂಡರು ಪಾಲ್ಗೊಂಡರು   

ಕೋಲಾರ: ‘ವಿಶ್ವಕರ್ಮ ಸಮುದಾಯದವರ ಕುಲ ಕಸುಬು ನಶಿಸುತ್ತಿದೆ. ಈ ಬಗ್ಗೆ ಸಮುದಾಯ ಜಾಗೃತಗೊಳ್ಳಬೇಕು. ಕುಲ ಕಸುಬು ಮುಂದುವರಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಿವಿಮಾತು ಹೇಳಿದರು.

ಇಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿ, ‘ಈಗ ಎಂಜಿನಿಯರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹಿಂದೆ ವಿಶ್ವಕರ್ಮರು ಜಗತ್ತಿಗೆ ವಾಸ್ತುಶಿಲ್ಪ, ಶಿಲ್ಪಕಲೆ ತಿಳಿಸಿಕೊಟ್ಟರು’ ಎಂದು ತಿಳಿಸಿದರು.

‘ವಿಶ್ವಕರ್ಮರನ್ನು ದೇವ ಶಿಲ್ಪಿ ಎಂತಲೂ ಕರೆಯುತ್ತಾರೆ. ರಾಜ್ಯದ ಬೇಲೂರು, ಹಳೇಬೀಡು, ಹಂಪಿಯಲ್ಲಿರುವ ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಸಮುದಾಯದವರು ಮೂಲ ಕಾರಣ. ಸಮುದಾಯದವರು ಪಂಚ ಕಸುಬು ಮಾಡುವ ಮೂಲಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದ್ದಾರೆ. ಸಣ್ಣ ಸಮುದಾಯ ಈಗ ಬೆಳಕಿಗೆ ಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಆಧುನಿಕ ಯುಗದಲ್ಲಿ ಪೋಷಕರು ತುಲನಾತ್ಮಕ ನೋಟ ಇಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು. ಇಲ್ಲವಾದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಿಲ್ಲ. ಮಕ್ಕಳು ಉದ್ಯೋಗಸ್ಥರಾದರೆ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ಜವಾಬ್ದಾರಿ ಮುಗಿಯಿತೆಂಬ ಭಾವನೆಯಿಂದ ಪೋಷಕರು ಹೊರ ಬರಬೇಕು’ ಎಂದು ಸಲಹೆ ನೀಡಿದರು.

‘ವಿಶ್ವಕರ್ಮ ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಬೇಕು. ಸಮುದಾಯದಲ್ಲಿನ ಸ್ಥಿತಿವಂತರು ಬಡವರಿಗೆ ನೆರವಾಗಬೇಕು. ಸಮುದಾಯದವರು ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳ ಸದುಪಯೋಗ ಪಡೆಯಬೇಕು. ಸಮುದಾಯದ ಕೌಶಲ ಮುಂದುವರಿಸಬೇಕು. ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕು’ ಎಂದರು.

ಸ್ವಾಗತಾರ್ಹ: ‘ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಜನಸಂಖ್ಯೆ ಸುಮಾರು 60 ಸಾವಿರವಿದೆ. ಪಂಚ ಕಸುಬುಗಳಾದ ಚಿನ್ನ ಮತ್ತು ಬೆಳ್ಳಿ ವ್ಯಾಪಾರ, ಶಿಲ್ಪಕಲೆ, ಬಡಗಿ, ಕಮ್ಮಾರಿಕೆ ಕಸಬುಗಳನ್ನು ಸಮುದಾಯವು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ’ ಎಂದು ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣು ವಿವರಿಸಿದರು.

‘ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಸಮುದಾಯದ ವೃತ್ತಿಗಳು ನೆಲಕಚ್ಚಿವೆ. ಆದ ಕಾರಣ ಪರ್ಯಾಯ ಉದ್ಯೋಗಾವಕಾಶ ಸೃಷ್ಟಿಸಬೇಕು. ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ತರಬೇತಿ ಶಿಬಿರ ಆಯೋಜಿಸುವ ಮೂಲಕ ಸಮುದಾಯದವರಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ರಾಜರ ಕಾಲವು ವಿಶ್ವಕರ್ಮ ಸಮುದಾಯದವರಿಗೆ ಸುವರ್ಣ ಯುಗವಾಗಿತ್ತು. ಆದರೆ, ಈಗಿನ ಪರಿಸ್ಥಿತಿ ನೆನೆದರೆ ನೋವಾಗುತ್ತದೆ. ಸಮುದಾಯದವರು 800 ಶತಮಾನದಿಂದ ಜಗತ್ತಿಗೆ ದೇವರ ಮೂರ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ದೇವರು ಇರುವವರೆಗೂ ಸಮುದಾಯವಿರುತ್ತದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿಶ್ವಕರ್ಮ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.