ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದ ಹೊರವಲಯದಲ್ಲಿರುವ ವಿದ್ಯಾಪನಾ ಸಮೂಹ ಸಂಸ್ಥೆಯಿಂದ ವಿದ್ಯಾಪನಾ ಕಾನೂನು ಕಾಲೇಜು ಪ್ರಾರಂಭೋತ್ಸವ ಶನಿವಾರ ಹಮ್ಮಿಕೊಳ್ಳಲಾಯಿತು.
ಮಾಲೂರು: ಮಾಸ್ತಿ ಗ್ರಾಮದ ಹೊರವಲಯದಲ್ಲಿರುವ ವಿದ್ಯಾಪನಾ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ವಿದ್ಯಾಪನಾ ಸಮೂಹ ಸಂಸ್ಥೆಯಿಂದ ಇತ್ತೀಚೆಗೆ ವಿದ್ಯಾಪನಾ ಕಾನೂನು ಕಾಲೇಜು ಆರಂಭೋತ್ಸವ ಮತ್ತು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ನಾಟಕದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ಎಚ್.ಎಸ್. ನಾಗಮೋಹನ್ ದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ವಿದ್ಯಾಸಂಸ್ಥೆಗಳನ್ನು ನಗರ ಪ್ರದೇಶಗಳಲ್ಲಿ ಕಟ್ಟಲಾಗುತ್ತದೆ. ಬಹುಪಾಲು ವಿದ್ಯಾ ಸಂಸ್ಥೆಗಳನ್ನು ವ್ಯಾಪಾರಕ್ಕಾಗಿ ಹಾಗೂ ಹಣ ಮಾಡವುದಕ್ಕಾಗಿ ಕಟ್ಟಲಾಗಿರುತ್ತದೆ. ಪ್ರಸ್ತುತ ಪಟ್ಟಣ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ಿನು ಆಸ್ಪತ್ರೆ ರೀತಿ ಕಟ್ಟಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವರು ಗ್ರಾಮಾಂತರ ಪ್ರದೇಶಕ್ಕೆ ಬಂದು ವಿದ್ಯಾಸಂಸ್ಥೆ ಕಟ್ಟುತ್ತಿದ್ದಾರೆ. ಆದರೆ, ಆ ಸಂಸ್ಥೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ. ಇತರೆ ರಾಜ್ಯ, ದೇಶದವರಿಗೆ, ಬೇರೆ ಕಡೆಯವರಿಗೆ ಸೀಟ್ ಕೊಟ್ಟು ಸಂಸ್ಥೆಗಳನ್ನು ನಡೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಿದ್ದೇವೆ ಎಂದರು.
ಭಾರತ ಸ್ವಾತಂತ್ರ್ಯಗೊಂಡ 75 ವರ್ಷಗಳ ಹಿಂದೆ ದೇಶದಲ್ಲಿ ಶೇ 16ರಷ್ಟು ಅಕ್ಷರಸ್ತರಿದ್ದರು. ಆ ಸಂಖ್ಯೆ ಈಗ ಶೇ 80 ಮೀರಿದೆ. ನಾವು ಸಾಕ್ಷರತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಆದರೆ, ಅನೇಕರಲ್ಲಿ ಕಾನೂನಿನ ಸಾಕ್ಷರತೆ ಕೊರತೆ ಇದೆ. ಜೊತೆಗೆ ಅವರಿಗೆ ಕಾನೂನಿನ ಅರಿವು ಇಲ್ಲ ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನವನ್ನು ಕೇವಲ ರಾಜಕಾರಣಿಗಳು, ವಕೀಲರು ಮಾತ್ರವಲ್ಲ ಸಾಧಾರಣ ಪ್ರಜೆಯೂ ಓದಿ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಕಾನೂನು ಕಾಲೇಜುಗಳ ಉದ್ದೇಶವು ಕೇವಲ ವಕೀಲರನ್ನು ತಯಾರು ಮಾಡುವಂಥದ್ದು ಆಗಿರದೆ, ಗ್ರಾಮೀಣ ಜನರಿಗೆ ಕಾನೂನು ಅರಿವು ಹೆಚ್ಚಿಸಬೇಕು ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಸ್ಥೆಯ ಸಂಸ್ಥಾಪಕ ಕೆ.ಎ.ರಾಮೇಗೌಡ ಅವರ ತಂದೆ ತಾಯಿಯವರ ಸ್ಮರಣಾರ್ಥವಾಗಿ ಶಾಲಾ ಶಿಕ್ಷಕರು, ಉಪನ್ಯಾಸಕರು, ಸಂಸ್ಥೆಯ ವ್ಯವಸ್ಥಾಪಕರು, ವಾಹನ ಚಾಲಕರು, ಸ್ವಚ್ಛತಾ ಸಿಬ್ಬಂದಿ ಅವರಿಗೆ ತಲಾ ₹50 ಸಾವಿರ ಪ್ರೋತ್ಸಾಹ ಧನ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಲೆಕ್ಕಪರಿಶೋಧಕ ಪುರುಷೋತ್ತಮ್, ರಾಜಶೇಖರ್, ಸಂಸ್ಥೆಯ ಸಂಸ್ಥಾಪಕ ಕೆ.ಎ.ರಾಮೇಗೌಡ, ಅರಿವು ಶಿವಪ್ಪ, ಕಾನೂನು ಕಾಲೇಜು ಪ್ರಾಂಶುಪಾಲ ವೆಂಕಟೇಶ್, ಆಡಳಿತಾಧಿಕಾರಿ ಕೆ. ಸ್ವಾತಿ, ಪ್ರಾಂಶುಪಾಲೆ ಲಾವಣ್ಯ ಬಾಯಿ, ವ್ಯವಸ್ಥಾಪಕ ಮಂಜುನಾಥ್. ಶಿಕ್ಷಕರು, ಉಪನ್ಯಾಸಕರು, ಸಂಸ್ಥೆಯ ಆಡಳಿತ ಮಂಡಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಸ್ತುತ ದೇಶದಲ್ಲಿ ಸಾಕ್ಷರತೆ ಹೆಚ್ಚಾಗಿದೆ. ಆದರೆ, ಕಾನೂನಿನ ಸಾಕ್ಷರತೆ ಇಲ್ಲ. ಆ ಕಾನೂನಿನ ಸಾಕ್ಷರತೆ ಹೆಚ್ಚಿಸುವುದಕ್ಕೆ ಹೆಚ್ಚು ಕಾನೂನಿನ ಕಾಲೇಜುಗಳು ಕೇವಲ ವಕೀಲರನ್ನು ಮಾಡುವ ಉದ್ದೇಶವಲ್ಲ. ಕಾನೂನಿನ ಕಾಲೇಜುಗಳು ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ಜನರಿಗೆ, ರೈತಾಪಿ ವರ್ಗದವರಿಗೆ, ಬಡವರಿಗೆ ಕಾನೂನಿನ ತಿಳುವಳಿಕೆ ನೀಡಬೇಕಾಗಿದೆ. ವಿದ್ಯಾಪನ ಸಮೂಹ ಸಂಸ್ಥೆ ಪ್ರಾರಂಭ ಮಾಡುತ್ತಿರುವ ಕಾನೂನು ಕಾಲೇಜು ಮಾಲೂರು ತಾಲೂಕಿನ ಜನತೆ ಸ್ವೀಕಾರ ಮಾಡುವಂತಹ ಕಾನೂನು ಕಾಲೇಜು ಆಗಬೇಕು. ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ನಿಕಟವಾದ ಸಂಪರ್ಕವನ್ನು ಜನರ ಮದ್ಯ ಇಟ್ಟು ಕೊಳ್ಳಬೇಕು. ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು ಜನರ ಕಾನೂನಿನ ಅರಿವನ್ನು ಹೆಚ್ಚಿಸಬೇಕು. ಬಹಳ ಮುಖ್ಯವಾಗಿ ಸಂವಿಧಾನದ ಅರಿವನ್ನು ಹೆಚ್ಚಿಸಬೇಕು. ಪ್ರಸ್ತುತ ಉಳಿದಿರುವುದು ಸಂವಿಧಾನ ಒಂದೇ ಅನೇಕ ರಾಜಕೀಯ ಪಕ್ಷಗಳು, ಮುಖಂಡರು ನಮ್ಮನ್ನು ಆಳಿದ್ದಾರೆ. ನಮಗೆ ಬೇಕಾದ್ದನ್ನು ಬದಲಾಯಿಸಿದ್ದೇವೆ. ಇವೆಲ್ಲ ಪ್ರಯೋಗಗಳಾದರೂ ಸಹ ದೇಶದ ಜನರ ಮುಂದೆ ಸಮಸ್ಯೆಗಳು, ಸವಾಲುಗಳಿವೆ. 75 ವರ್ಷ ಸಂವಿಧಾನ ಜಾರಿ ಬಂದ ನಂತರವೂ ಸಮಸ್ಯೆಗಳು ಮುಂದುವರೆಯುತ್ತಿವೆ. ಯಾಕೆ, ಈ ಸವಾಲುಗಳ ಕುರಿತು ಪ್ರಶ್ನೆ ಹಾಕಿಕೊಂಡಾಗ ನಾವು ಸಂವಿಧಾನ ತಿಳುವಳಿಕೆಯನ್ನು ಪಡೆಯಲಿಲ್ಲ. ಸಂವಿಧಾನವನ್ನು ಓದಲಿಲ್ಲ, ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ. ಅದರ ಆಶಯಗಳನ್ನು ಮೈಗೂಡಿಸಕೊಳ್ಳಲಿಲ್ಲ ಅದರಂತೆ ನಾವು ನಡೆದುಕೊಳ್ಳಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.