ADVERTISEMENT

ಯಡಿಯೂರಪ್ಪ ಮತ್ತೆ ಬಿಜೆಪಿ ಮುಂದಾಳತ್ವ ವಹಿಸಲಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 21:58 IST
Last Updated 5 ಫೆಬ್ರುವರಿ 2025, 21:58 IST
<div class="paragraphs"><p>ಬಿ.ಶ್ರೀರಾಮುಲು</p></div>

ಬಿ.ಶ್ರೀರಾಮುಲು

   

ಕೋಲಾರ: ರಾಜ್ಯ ಬಿಜೆಪಿಯಲ್ಲಿ ಅನೇಕ ಗೊಂದಲಗಳು ಇರುವುದು ನಿಜ. ಆ ಎಲ್ಲ ಗೊಂದಲಗಳು ನಿವಾರಣೆಯಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ಬಿ.ಎಸ್‌. ಯಡಿಯೂರಪ್ಪ ಮತ್ತೆ ಪಕ್ಷದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಧ್ಯಕ್ಷರಾಗಿದ್ದಾಗ ಯಾರೂ ತುಟಿ ಪಿಟಿಕ್‌ ಎನ್ನುತ್ತಿರಲಿಲ್ಲ ಎಂದರು.

ADVERTISEMENT

‘ಮೊದಲ ಬಾರಿಗೆ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ. ಹಾಗಾಗಿ ಪಕ್ಷದಲ್ಲಿ ಗೊಂದಲಗಳು ಉಂಟಾಗಿವೆ. ಹಾಗಂತ ರಾಜ್ಯ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಾಯಿಸುವಂತೆ ನಾನೇನೂ ಒತ್ತಾಯ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಆಕಸ್ಮಾತ್‌ ಹೈಕಮಾಂಡ್‌ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿದರೆ ಬಿಜೆಪಿ ಅಧ್ಯಕ್ಷನಾಗಲು ನಾನು ಸಿದ್ಧ. ಪರಿಶಿಷ್ಟ ಪಂಗಡದ ನನಗೆ ಅವಕಾಶ ನೀಡಿದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವೆ’ ಎಂದರು.

‘ಪಕ್ಷದೊಳಗೆ ಭಿನ್ನಾಭಿಪ್ರಾಯ ಸಹಜ. ನಾನು ಯಾವುದೇ ಬಣದ ಜೊತೆ ಗುರುತಿಸಿಕೊಂಡಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಹೋಗಲಾಡಿಸುವೆ. 2028ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವಂತೆ ಮಾಡುತ್ತೇನೆ’ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಈವರೆಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ಪಕ್ಷಕ್ಕಾಗಿ ಸುಮಾರು ವರ್ಷಗಳಿಂದ ಶ್ರಮಿಸಿದ್ದು ಸೇವೆಯನ್ನು ಗುರುತಿಸಿ ರಾಜ್ಯ ಅಧ್ಯಕ್ಷ ಸ್ಥಾನ ನೀಡಲಿ ಎಂಬ ಬೇಡಿಕೆ ಮಾತ್ರ ಇಡುತ್ತಿದ್ದೇನೆ.
ಬಿ.ಶ್ರೀರಾಮುಲು, ಬಿಜೆಪಿ ಮುಖಂಡ

‘ಬಸನಗೌಡ ಪಾಟೀಲ ಯತ್ನಾಳ ಕೂಡ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದು ಸಂತೋಷ ತಂದಿದೆ. ಯಡಿಯೂರಪ್ಪ ಅವರಿಂದ ನಾವೆಲ್ಲಾ ಬೆಳೆದಿದ್ದೇವೆ. ಅವರು‌ ಮನಸ್ಸು ಮಾಡಿ, ಆಶೀರ್ವಾದ ಮಾಡಿ ಅವಕಾಶ ಮಾಡಿಕೊಟ್ಟರೆ ಮತ್ತಷ್ಟು ಸಂತೋಷವಾಗಲಿದೆ’ ಎಂದರು.

‘ನನಗೆ ನಾಟಕ ಮಾಡಲು ಬರಲ್ಲ’

‘ನನಗೆ ನಾಟಕ ಮಾಡಲು ಬರುವುದಿಲ್ಲ. ಇದ್ದದ್ದನ್ನು ಇದ್ದಂತೆ ನೇರವಾಗಿ ಮಾತನಾಡುತ್ತೇನೆ. ಸತ್ಯ ಧರ್ಮದ ಮೇಲೆ ರಾಜಕೀಯ ಮಾಡುತ್ತಿರುವೆ’ ಎಂದು ಶ್ರೀರಾಮುಲು ಹೇಳಿದ್ದಾರೆ.

ಕೆಲವರು ಪ್ರಪಂಚವೇ ತಮ್ಮ ಕೈಯಲ್ಲಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುತ್ತಾರೆ. ನಾಟಕ ಮಾಡಿ ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡಿರುತ್ತಾರೆ. ನಾನು ಕೈಯಲ್ಲಿ ಕೈಲಾಸ ತೋರಿಸುವುದಿಲ್ಲ. ನಾನು ಸೋತಿದ್ದರೂ ಜನ ನನ್ನ ಪರವಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.