ADVERTISEMENT

ಎಲ್‌ಎಲ್‌ಬಿ ಪದವಿ ಕೋರ್ಸ್‌ ಪ್ರಾರಂಭ

ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆ ಕುಲಾಧಿಪತಿ ನಾಗರಾಜ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 17:32 IST
Last Updated 11 ಜುಲೈ 2025, 17:32 IST
ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕುಲಾಧಿಪತಿ ಜಿ.ಎಚ್‌.ನಾಗರಾಜ ಮಾತನಾಡಿದರು. ಜೆ.ರಾಜೇಂದ್ರ, ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಡಾ.ಬಿ.ವೆಂಗಮ್ಮ, ಡಾ.ಕೃಷ್ಣಪ್ಪ ಇದ್ದಾರೆ
ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕುಲಾಧಿಪತಿ ಜಿ.ಎಚ್‌.ನಾಗರಾಜ ಮಾತನಾಡಿದರು. ಜೆ.ರಾಜೇಂದ್ರ, ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಡಾ.ಬಿ.ವೆಂಗಮ್ಮ, ಡಾ.ಕೃಷ್ಣಪ್ಪ ಇದ್ದಾರೆ    

ಕೋಲಾರ: ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನಲ್ಲಿ ಎಲ್‌ಎಲ್‌ಬಿ (ಕಾನೂನು) ಪದವಿ ಕೋರ್ಸ್‌ ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಕುಲಾಧಿಪತಿ ಜಿ.ಎಚ್‌.ನಾಗರಾಜ ತಿಳಿಸಿದರು.

ನಗರದ ಹೊರವಲಯದ ಟಮಕದಲ್ಲಿರುವ ಸಂಸ್ಥೆಯ ಕೌನ್ಸಿಲ್‌ ಹಾಲ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅನುಮೋದನೆ ದೊರಕಿದೆ. ಅನುಮತಿ ಕೊಡಿಸುವ ಸಂಬಂಧ ಸಂಸದ ಎಂ.ಮಲ್ಲೇಶ್‌ ಬಾಬು ಕೂಡ ಪ್ರಯತ್ನ ಹಾಕಿದ್ದರು. ಆರಂಭದಲ್ಲಿ ಎಲ್‌ಎಲ್‌ಬಿ ಪದವಿ ಕೋರ್ಸ್‌ (3 ವರ್ಷ) ಆರಂಭಿಸುತ್ತಿದ್ದು, 60 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಇರುತ್ತದೆ’ ಎಂದರು.

‘ಈ ಸಂಬಂಧ ಸಂಸ್ಥೆಯಲ್ಲಿ ಮೂಲಸೌಕರ್ಯ ಇದ್ದು, ನುರಿತ ಪ್ರಾಧ್ಯಾಪಕರು ಹಾಗೂ ಹಿರಿಯ ವಕೀಲರಿಂದ ಬೋಧನೆ ಮಾಡಲಾಗುವುದು. ಫೋರೆನ್ಸಿಕ್ ಮೆಡಿಸನ್‌ ಕೋರ್ಸ್‌ ಕೂಡ ನಮ್ಮಲ್ಲಿದ್ದು, ಅದರಲ್ಲಿ ಕಾನೂನು ವಿಚಾರಗಳಿರುತ್ತವೆ. ಹೀಗಾಗಿ, ಎಲ್‌ಎಲ್‌ಬಿ ಕೋರ್ಸ್‌ ಸಹಾಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಇದಲ್ಲದೆ ಫಾರ್ಮಸಿ ಕೋರ್ಸ್ ಕೂಡ ಶುರು ಮಾಡಲಾಗಿದೆ. ನರ್ಸಿಂಗ್‌ ಕೋರ್ಸ್‌ನ ಸೀಟಿನ ಪ್ರಮಾಣವನ್ನು 100ರಿಂದ 200ಕ್ಕೆ ಏರಿಸಲಾಗಿದೆ. ಆದರೆ, ನರ್ಸಿಂಗ್‌ ಕೋರ್ಸ್‌ಗೆ ಪ್ರವೇಶಾತಿ ಪಡೆಯುವವರಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯವರೇ ಕಡಿಮೆ. ಕೇರಳ ಹಾಗೂ ಒಡಿಶಾದಿಂದ ಹೆಚ್ಚಾಗಿ ಬರುತ್ತಿದ್ದಾರೆ’ ಎಂದರು.

‘ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ಕೂಡ ಆರಂಭಿಸುತ್ತಿದ್ದೇವೆ. ಇದಕ್ಕೆ ₹30 ಕೋಟಿವರೆಗೆ ಬಂಡವಾಳ ಹೂಡುತ್ತಿದ್ದೇವೆ. ವಿಪರ್ಯಾಸವೆಂದರೆ ಜನರು ಕ್ಯಾನ್ಸರ್‌ ತಪಾಸಣೆಗೆ ಒಳಗಾಗುತ್ತಿಲ್ಲ. ಕನಿಷ್ಠ ಆರು ತಿಂಗಳಿಗೊಮ್ಮೆ ತಪಾಸಣೆ ‌ಮಾಡಿಸಿಕೊಂಡರೆ ಏನಾದರೂ ಸಮಸ್ಯೆ ಇದ್ದರೆ ಬೇಗನೇ ಪತ್ತೆಯಾಗುತ್ತದೆ’ ಎಂದು ಸಲಹೆ ನೀಡಿದರು.

ಶ್ರೀ ದೇವರಾಜ ಅರಸು ಶೈಕ್ಷಣಿಕ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ‘ಈಗಾಗಲೇ ದೊಡ್ಡಬಳ್ಳಾಪುರದಲ್ಲಿರುವ ನಮ್ಮ ಸಂಸ್ಥೆಯಲ್ಲಿ ಮೂರು ವರ್ಷ ಹಾಗೂ ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಇದೆ. ಕೋಲಾರದಲ್ಲೂ ಮುಂದೆ ಐದು ವರ್ಷದ ಎಲ್‌ಎಲ್‌ಬಿ ಪದವಿ ಆರಂಭಿಸುತ್ತೇವೆ’ ಎಂದರು.

ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ಪ ಮಾತನಾಡಿ, ‘ನಮ್ಮ ಆಸ್ಪತ್ರೆಯಲ್ಲಿ ಸದ್ಯದಲ್ಲೇ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಆರಂಭಿಸಲಾಗುವುದು. ಲಿವರ್ ಟ್ರಾನ್ಸ್‌ಪ್ಲಾಂಟ್ ಕೂಡ ಮಾಡಲಾಗುವುದು. ಈಗಾಗಲೇ ಆಸ್ಪತ್ರೆಯಲ್ಲಿ ಉಚಿತವಾಗಿ ಹೆರಿಗೆ ಮಾಡಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಡಿ.ವಿ.ಎಲ್.ಎನ್.ಪ್ರಸಾದ್, ಕುಲಸಚಿವೆ ಡಾ.ಬಿ.ವೆಂಗಮ್ಮ, ಸಚಿವ ಡಾ.ಸಿ.ಮುನಿನಾರಾಯಣ, ಪ್ರಾಂಶುಪಾಲ ಡಾ.ಕೆ.ಪ್ರಭಾಕರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.