ಕೆಜಿಎಫ್: ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಕ್ಕೂ ಮೊದಲು ನಗರದ ಜನರಿಗೆ ಭಾವನಾತ್ಮಕವಾಗಿ ನಂಟು ಅಂಚೆ ಕಚೇರಿ. ಊರಿಗಾಂ ಅಂಚೆ ಕಚೇರಿ ಮತ್ತೆ ಪ್ರಾರಂಭವಾಗುವುದೇ ಎಂಬ ನಿರೀಕ್ಷೆಯಲ್ಲಿ ಮೈನಿಂಗ್ ಕಾಲೊನಿ ಜನ ಇದ್ದಾರೆ.
ಸಂಬಳ, ಪಿಂಚಣಿ, ಹಣ ಕಳಿಸುವುದು, ಟೆಲಿಗ್ರಾಂ ಮೊದಲಾದ ಸೇವೆ ನೀಡುತ್ತಾ ಬಂದಿದ್ದ ಅಂಚೆ ಕಚೇರಿ ಕಟ್ಟಡ ಶಿಥಿಲಗೊಂಡಿದೆ ಎಂಬ ಕಾರಣವೊಡ್ಡಿ ಇಲಾಖೆ ಅದನ್ನು ಮುಚ್ಚಿ ರಾಬರ್ಟಸನ್‌ಪೇಟೆ ಕೇಂದ್ರ ಕಚೇರಿಗೆ ವರ್ಗಾಯಿಸಿದೆ. ಸುಮಾರು 6000ಕ್ಕೂ ಹೆಚ್ಚು ಪಿಂಚಣಿದಾರರು, ಮತ್ತಿತರರು ಈಗ ರಾಬರ್ಟಸನ್‌ಪೇಟೆಗೆ ಹೋಗಬೇಕಾಗಿದೆ. ಒಂದು ದಶಕದ ಹಿಂದೆ ಮುಚ್ಚಿದ ಅಂಚೆ ಕಚೇರಿ ಮತ್ತೆ ಆರಂಭವಾಗಲಿದೆ ನಿರೀಕ್ಷೆ ಇಲ್ಲಿನ ಜನರದ್ದು.
ಊರಿಗಾಂ ಸ್ಟೇಡಿಯಂ ಬಳಿ ಇರುವ ಅಂಚೆ ಕಚೇರಿ ಮೊದಲು ನಗರದ ಕೇಂದ್ರ ಅಂಚೆ ಕಚೇರಿಯಾಗಿತ್ತು. ನಗರದ ಬಹುತೇಕ ಪ್ರಮುಖ ವಹಿವಾಟು ಅಲ್ಲಿಯೇ ನಡೆಯುತ್ತಿದ್ದವು. ಈಗ ಇರುವ ರಾಬರ್ಟಸನ್‌ಪೇಟೆ ಯಲ್ಲಿರುವ ಎಸ್‌ಬಿಐ ( ಮೊದಲಿನ ಮೈಸೂರು ಬ್ಯಾಂಕ್) ಕೂಡ ಊರಿಗಾಂ ಶಾಖೆ ಎಂದೇ ಹೆಸರಾಗಿತ್ತು. ಬಿಜಿಎಂಎಲ್, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಕಾನೂನು ಕಾಲೇಜು, ಎಂಜಿನಿಯರಿಂಗ್ ಕಾಲೇಜು ಊರಿಗಾಂ ಅಂಚೆ ಕಚೇರಿ ವ್ಯಾಪ್ತಿಗೆ ಬರುತ್ತಿತ್ತು. ಚಿನ್ನದ ಗಣಿ ಮುಚ್ಚಿದ ಮೇಲೆ ಅಂಚೆ ಕಚೇರಿ ವಹಿವಾಟು ಕಡಿಮೆಯಾದರೂ, ಸರ್ಕಾರಿ ಫಲಾನುಭವಿಗಳು ಮತ್ತು ಪಿಂಚಣಿದಾರರಿಗೆ ಮುಖ್ಯ ಕೇಂದ್ರವಾಗಿತ್ತು.
ಗಣಿ ಮುಚ್ಚಿದ ಮೇಲೆ ಶಿಥಿಲವಾಗುತ್ತ ಬಂದಿದ್ದ ಅಂಚೆ ಕಚೇರಿಗೆ ಬಿಜಿಎಂಎಲ್ ದುರಸ್ತಿಗೆ ಹಣ ಬಿಡುಗಡೆ ಮಾಡಲಿಲ್ಲ. ಕಟ್ಟಡ ದಿನೇ ದಿನೇ ಶಿಥಿಲಗೊಂಡಿತು. ಇಂತಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗಿತ್ತು. ಕಚೇರಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವುದು ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಮೈನಿಂಗ್ ಕಾಲೊನಿ ಜನ ಅಂಚೆ ಕಚೇರಿ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದರು. ಅವರ ಒತ್ತಡಕ್ಕೆ ಮಣಿದ ಶಾಸಕಿ ಎಂ.ರೂಪಕಲಾ ದುರಸ್ತಿಗಾಗಿ ₹5 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದರು. ಆದರೆ, ಬಿಜಿಎಂಎಲ್ ಅಧಿಕಾರಿಗಳು ಅನುದಾನ ಬಳಸಿಕೊಳ್ಳಲು ಸಿದ್ಧರಿರಲಿಲ್ಲ. ಬಿಜಿಎಂಎಲ್‌ನಲ್ಲಿ ಖಾಲಿ ಇರುವ ಯಾವುದಾದರೂ ಉತ್ತಮ ಪರಿಸ್ಥಿತಿಯಲ್ಲಿರುವ ಕಟ್ಟಡ ಕೊಟ್ಟರೂ ಸಾಕು. ಅದರಲ್ಲಿ ಅಂಚೆ ಕಚೇರಿ ಸ್ಥಾಪಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಅಧಿಕಾರಿಗಳು ಕೇಂದ್ರದ ಅನುಮತಿ ಬೇಕಾಗಿದೆ ಎಂಬ ನೆಪ ಹೇಳಿ ಅನುಮತಿ ನಿರಾಕರಿಸಿದರು.
ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ಈಗ ಪಿಂಚಣಿ ಮೊದಲಾದ ಕೆಲಸಕ್ಕಾಗಿ ದೂರದ ರಾಬರ್ಟಸನ್‌ಪೇಟೆ ಅಂಚೆ ಕಚೇರಿಗೆ ಹೋಗಬೇಕಾಗಿದೆ. ಸಣ್ಣ ಕೆಲಸಕ್ಕೆ ಆಟೊದಲ್ಲಿ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ವೃದ್ಧರು, ಅಂಗವಿಕಲರು, ಮಹಿಳೆಯರು ಕಷ್ಟಪಡುತ್ತಿದ್ದಾರೆ. 563120 ಎಂಬ ಪಿನ್ ಸಂಖ್ಯೆಯನ್ನು ಊರಿಗಾಂ ಅಂಚೆ ಕಚೇರಿ ಹೊಂದಿದೆ. ಕೂಡಲೇ ಊರಿಗಾಂ ಅಂಚೆ ಕಚೇರಿ ಪುನರಾರಂಭ ಮಾಡದೆ ಇದ್ದಲ್ಲಿ ಈ ನಂಬರ್ ಶಾಶ್ವತವಾಗಿ ಇಲ್ಲದಾಗುತ್ತದೆ ಎಂಬ ಭೀತಿಯನ್ನು ಅಂಚೆ ಕಚೇರಿ ಸಿಬ್ಬಂದಿ ಕೂಡ ವ್ಯಕ್ತಪಡಿಸುತ್ತಾರೆ.
ಬಿಜಿಎಂಎಲ್‌ನಲ್ಲಿ ಹಲವು ಕಟ್ಟಡಗಳಲ್ಲಿ ಕಚೇರಿಗಳು ಇಲ್ಲದೆ ನಿರುಪಯುಕ್ತವಾಗಿದೆ. ಒಂದು ಒಳ್ಳೆಯ ಕಟ್ಟಡ ಕೊಟ್ಟರೆ ಮೈನಿಂಗ್ ಕಾಲೊನಿ ಜನರಿಗೆ ಒಳ್ಳೆಯದಾಗುತ್ತದೆಅರುಳ್ ಮೈನಿಂಗ್ ಕಾಲೊನಿ ನಿವಾಸಿ
ಎಂಟು ನೂರು ರೂಪಾಯಿ ಪಿಂಚಣಿಗೆ ನೂರು ರೂಪಾಯಿ ಆಟೊ ಖರ್ಚು ಮಾಡಿಕೊಂಡು ಹೋಗಬೇಕು. ಇಲ್ಲಿಯೇ ಅಂಚೆ ಕಚೇರಿ ಇದ್ದರೆ ಉತ್ತಮಚಿನ್ನಮ್ಮ ಮೈನಿಂಗ್ ಕಾಲೊನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.