ADVERTISEMENT

ಲಾಕ್‌ಡೌನ್‌: ಕೋಲಾರ ಜಿಲ್ಲೆಯ ಎಪಿಎಂಸಿಗೆ ವಿನಾಯಿತಿ

ರೈತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:23 IST
Last Updated 4 ಜುಲೈ 2020, 14:23 IST
ರೈತರ ಸಮಸ್ಯೆಗಳ ಸಂಬಂಧ ಕೋಲಾರ ಎಪಿಎಂಸಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿದರು.
ರೈತರ ಸಮಸ್ಯೆಗಳ ಸಂಬಂಧ ಕೋಲಾರ ಎಪಿಎಂಸಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿದರು.   

ಕೋಲಾರ: ‘ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರ ಲಾಕ್‌ಡೌನ್‌ ಮಾಡುವಂತೆ ಆದೇಶ ನೀಡಿದೆ. ಆದರೆ, ಜಿಲ್ಲೆಯ ಎಪಿಎಂಸಿಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ರೈತರ ಸಮಸ್ಯೆಗಳ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ‘ಮಾರ್ಚ್ 24ರ ನಂತರ ಜಾರಿಯಾದ ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ತರಕಾರಿ ಬೆಲೆ ಕುಸಿದು ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗ ಮತ್ತೆ ಮಾರುಕಟ್ಟೆ ಬಂದ್ ಮಾಡಿ ರೈತರಿಗೆ ತೊಂದರೆ ಮಾಡಲು ನಾವು ಸಿದ್ಧರಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿನ ಭೀತಿ ಹೆಚ್ಚಿಲ್ಲ. ಹೀಗಾಗಿ ಭಾನುವಾರದಂದು ಎಪಿಎಂಸಿಗಳನ್ನು ಬಂದ್ ಮಾಡುವುದಿಲ್ಲ. ಸದ್ಯ ಟೊಮೆಟೊಗೆ ಉತ್ತಮ ಬೆಲೆಯಿದೆ. ಮಾರುಕಟ್ಟೆಗಳನ್ನು ಬಂದ್ ಮಾಡಿದರೆ ಬೆಲೆ ಮತ್ತೆ ಕುಸಿಯುತ್ತದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ರೈತರ ಕಷ್ಟ ಅರಿತು ಎಪಿಎಂಸಿ ಬಂದ್ ಮಾಡದಿರುವ ನಿರ್ಧಾರ ಕೈಗೊಂಡಿದ್ದೇವೆ. ಜಿಲ್ಲೆಯ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ಹೇಳಿದರು.

ADVERTISEMENT

ಜಮೀನು ಮಂಜೂರು: ‘ಕೋಲಾರ ಎಪಿಎಂಸಿಯಲ್ಲಿ ತರಕಾರಿ ವಹಿವಾಟಿಗೆ ಜಾಗದ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಪರಿಹಾರಕ್ಕೆ 50 ಎಕರೆ ಜಮೀನು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಎಪಿಎಂಸಿ ಆಡಳಿತ ಮಂಡಳಿಯವರು ಒಗ್ಗಟ್ಟಿನಿಂದ ಸೂಕ್ತ ಜಾಗ ಗುರುತಿಸಿದರೆ ಸರ್ಕಾರದಿಂದ ಕೂಡಲೇ ಮಂಜೂರು ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಮಡೇರಹಳ್ಳಿ ಬಳಿ 30 ಹೆಕ್ಟೇರ್ ಜಮೀನು ನೋಡಲಾಗಿತ್ತು. ಆದರೆ, ಸರ್ಕಾರ ಇದಕ್ಕೆ ಒಪ್ಪಿಗೆ ನೀಡದ ಕಾರಣ ಕಡತ ವಾಪಸ್‌ ಬಂದಿದೆ. ಕೊರೊನಾ ಸೋಂಕಿನ ಆತಂಕದಿಂದಾಗಿ ಆ ಕಡೆ ಗಮನ ಹರಿಸಲು ಸಾಧ್ಯವಾಗಿಲ್ಲ. ಜಮೀನಿನ ವಿಚಾರದಲ್ಲಿ ಈ ಹಿಂದೆ ಆಗಿರುವ ಬೆಳವಣಿಗೆಗಳ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಬೇರೆಡೆ ಹೊಸ ಜಾಗ ಗುರುತಿಸಬೇಕು’ ಎಂದರು.

‘ಎಪಿಎಂಸಿಯಲ್ಲಿ ಸೆಸ್ ಕಡಿಮೆ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಹಕಾರ ಇಲಾಖೆ ಸಚಿವರ ಜತೆ ಚರ್ಚಿಸುತ್ತೇವೆ. ಟೊಮೆಟೊ ಹಾಳಾಗದಂತೆ ವೈಜ್ಞಾನಿಕವಾಗಿ ಸುರಕ್ಷತಾ ಕ್ರಮ ಅನುಸರಿಸುವ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚೆ ಮಾಡುತ್ತೇನೆ’ ಎಂದು ವಿವರಿಸಿದರು.

ಜಿಪುಣತನವಿಲ್ಲ: ‘ಘನ ತ್ಯಾಜ್ಯ ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ ಜಮೀನು ನೀಡಿದ್ದೇವೆ. ಅದೇ ರೀತಿ ಎಪಿಎಂಸಿಗೆ ಜಮೀನು ನೀಡಲು ಜಿಪುಣತನ ಮಾಡುವುದಿಲ್ಲ. ಜೈವಿಕ ಇಂಧನ ಘಟಕ ಸ್ಥಾಪನೆಗೂ ಅನುಕೂಲವಾಗುವಂತೆ ಜಾಗ ಗುರುತಿಸಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ದಿನಕ್ಕೆ 10ಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗುತ್ತಿವೆ. ಎಪಿಎಂಸಿಯಲ್ಲಿ ಅನೇಕರು ಮಾಸ್ಕ್ ಧರಿಸದಿರುವುದನ್ನು ಗಮನಿಸಿದ್ದೇನೆ. ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಎಪಿಎಂಸಿಗೆ ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡಬೇಕು. ಆಗಲೂ ಮಾಸ್ಕ್‌ ಧರಿಸದಿದ್ದರೆ ದಂಡ ಹಾಕಿ’ ಎಂದು ಸೂಚಿಸಿದರು.

‘ಆಂಧ್ರಪ್ರದೇಶದ ಚಿತ್ತೂರು ಸಮೀಪ 200 ಎಕರೆಯಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೋಲಾರ ಎಪಿಎಂಸಿಯ ಜಾಗದ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲೆಯ ರೈತರು ಚಿತ್ತೂರಿನ ಮಾರುಕಟ್ಟೆಯತ್ತ ಹೋಗುತ್ತಾರೆ. ನಂತರ ಇಲ್ಲಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಆದ ಕಾರಣ ಎಪಿಎಂಸಿಯ ಜಾಗದ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಕೆ.ಮಂಜುನಾಥ್, ಉಪಾಧ್ಯಕ್ಷ ವೆಂಕಟೇಶ್, ತಹಶೀಲ್ದಾರ್ ಶೋಭಿತಾ, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ರೈತರು, ಮಂಡಿ ಮಾಲೀಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.