ADVERTISEMENT

ಲೋಕ ಅದಾಲತ್; ವಿವಿಧ 79,569 ಪ್ರಕರಣಗಳು ಇತ್ಯರ್ಥ

ಜಿಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ₹ 50.09 ಕೋಟಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:54 IST
Last Updated 14 ಡಿಸೆಂಬರ್ 2025, 6:54 IST
ಕೋಲಾರದಲ್ಲಿ ಶನಿವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ನಟೇಶ್‌ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು
ಕೋಲಾರದಲ್ಲಿ ಶನಿವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ನಟೇಶ್‌ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಡೆಯಿತು   

ಕೋಲಾರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವಿಜಯಕುಮಾರ್ ಎಂ.ಆನಂದಶೆಟ್ಟಿ ನೇತೃತ್ವದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ 79,569 ಪ್ರಕರಣಗಳು ಇತ್ಯರ್ಥಗೊಂಡಿವೆ.

ಇದೇ ಸಂದರ್ಭದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ ದಂಪತಿ ರಾಜೀ ಮೂಲಕ ಮತ್ತೆ ಒಂದುಗೂಡಿ ಹೊಸ ಜೀವನ ಆರಂಭಿಸಲು ಮುಂದಾಗಿದ್ದು, ಅದಾಲತ್‌ನಿಂದ ಉತ್ತಮ ಫಲಿತಾಂಶ ವ್ಯಕ್ತವಾಯಿತು.

ಸುಮಾರು ₹ 50.09 ಕೋಟಿ ಪರಿಹಾರದ ಮೊತ್ತ ಒಳಗೊಂಡಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ನಟೇಶ್ ತಿಳಿಸಿದ್ದಾರೆ.

ADVERTISEMENT

ಲೋಕ ಅದಾಲತ್ ಬೈಠಕ್‌ಗಳು ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲಿ ನಡೆದಿದ್ದು, ಪರಸ್ಪರ ರಾಜಿ ಮೂಲಕ ಪ್ರಕರಣಗಳ ಇತ್ಯರ್ಥವಾಗಿವೆ. ಇದರಿಂದ ಸೌಹಾರ್ದ ಮೂಡಲು ಸಹಕಾರಿಯಾಗಿದೆ ಎಂದಿದ್ದಾರೆ.

ಇವುಗಳಲ್ಲಿ ರಾಜಿ ಆಗುವ ಕ್ರಿಮಿನಲ್ ಪ್ರಕರಣಗಳ 465, ಚೆಕ್‌ ಬೌನ್ಸ್ ಪ್ರಕರಣಗಳು 327, ಕೌಟುಂಬಿಕ ಪ್ರಕರಣಗಳು 24, ವಿಭಾಗದ ದಾವೆಗಳು 100, ಇತರೆ ಸಿವಿಲ್ ಪ್ರಕರಣಗಳು 460, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು 23, ಇತರೆ ಕ್ರಿಮಿನಲ್ ಪ್ರಕರಣಗಳು 8,755 ಸೇರಿ ಒಟ್ಟು ಚಾಲ್ತಿಯಲ್ಲಿರುವ 9,735 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು 69,834 ಸೇರಿ ಒಟ್ಟು 79,569 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದ್ದಾರೆ.

ಅದಾಲತ್‌ಗೂ ಮುನ್ನಾ ರಾಷ್ಟ್ರೀಯ ಲೋಕ ಅದಾಲತ್‌ಗೆ ಚಾಲನೆ ನೀಡಿದ ವಿಜಯಕುಮಾರ್ ಎಂ.ಆನಂದಶೆಟ್ಟಿ, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ನ್ಯಾಯಾಲಯಗಳಿಗೆ ಜನರ ಅಲೆದಾಟ ತಪ್ಪಿಸಲು, ಸಮಾಜದಲ್ಲಿ ಶಾಂತಿ, ಪರಸ್ಪರ ಸೌಹಾರ್ದ ನೆಲೆಗೊಳ್ಳಲು ಇಂತಹ ಅದಾಲತ್‌ಗಳು ಸಹಕಾರಿಯಾಗಿವೆ. ಪ್ರಕರಣಗಳ ಇತ್ಯರ್ಥದಿಂದಾಗಿ ನ್ಯಾಯಾಲಯಗಳ ಸಮಯ ಮಾತ್ರವಲ್ಲ; ಕಕ್ಷಿದಾರರ ಸಮಯ, ಹಣವೂ ಉಳಿಯುತ್ತದೆ ಎಂದು ತಿಳಿಸಿದ್ದಾರೆ.

ಲೋಕ ಅದಾಲತ್‌ಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ, ಕಾರ್ಯದರ್ಶಿ ಕೆ.ವಿ.ಆದರ್ಶ, ವಕೀಲರ ಸಂಘದ ಎಲ್ಲ ಪದಾಧಿಕಾರಿಗಳು, ಎಲ್ಲ ವಕೀಲರು, ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಸಿಬ್ಬಂದಿ, ಕಕ್ಷಿದಾರರಿಗೆ ನಟೇಶ್ ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.