ADVERTISEMENT

ಅಧಿಕಾರಿಗಳಿಗೆ ತರಾಟೆ; ಸಾರ್ವಜನಿಕರಿಂದ ಚಪ್ಪಾಳೆ!

ಆತ್ಮಸಾಕ್ಷಿ ಇರುವ ಯಾರೂ ಲಂಚ ಕೇಳಲ್ಲ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಉಪಲೋಕಾಯುಕ್ತ ವೀರಪ್ಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 7:16 IST
Last Updated 18 ಡಿಸೆಂಬರ್ 2025, 7:16 IST
ದೂರುದಾರರು ಹಾಗೂ ಅಧಿಕಾರಿಗಳಿಂದ ಉಪಲೋಕಾಯುಕ್ತರಿಗೆ ವಿವರಣೆ
ದೂರುದಾರರು ಹಾಗೂ ಅಧಿಕಾರಿಗಳಿಂದ ಉಪಲೋಕಾಯುಕ್ತರಿಗೆ ವಿವರಣೆ   

ಕೋಲಾರ: ದೂರುಗಳ ವಿಚಾರಣೆ ಹಾಗೂ ಬಾಕಿ ದೂರುಗಳ ವಿಲೇವಾರಿಯಲ್ಲಿ ತೊಡಗಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಭ್ರಷ್ಟಾಚಾರದ ವಿರುದ್ಧ ಗುಡುಗುತ್ತಾ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ
ಇತ್ತ ಸಭಾಂಗಣದಲ್ಲಿ ಕುಳಿತ್ತಿದ್ದ ದೂರುದಾರರು ಹಾಗೂ
ಸಾರ್ವಜನಿಕರು ಚಪ್ಪಾಳೆ ತಟ್ಟಿ
ಸಂಭ್ರಮಿಸುತ್ತಿದ್ದರು.

ಕೆಲಸ ಮಾಡಿಕೊಡಲು ವಿಳಂಬ ಮಾಡುವ ಹಾಗೂ ಲಂಚಕ್ಕೆ ಬೇಡಿಕೆ ಇಡುವ ಕೆಲ ಅಧಿಕಾರಿಗಳು ವಿರುದ್ಧದ ಆಕ್ರೋಶದಂತೆ ಅದು ಭಾಸವಾಗುತಿತ್ತು. ಇದಕ್ಕೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಸಂಸ್ಥೆಯ ಕಾರ್ಯಕ್ರಮ
ಸಾಕ್ಷಿಯಾಯಿತು.

ಉಪಲೋಕಾಯುಕ್ತರು ಮೊದಲ ದಿನ 10 ಸ್ವಯಂಪ್ರೇರಿತ ಪ್ರಕರಣಗಳು ಸೇರಿದಂತೆ ಒಟ್ಟು 116 ಪ್ರಕರಣಗಳನ್ನು ವಿಲೇವಾರಿ ಮಾಡಿದರು. ಉಳಿದ 128 ಪ್ರಕರಣಗಳನ್ನು ಗುರುವಾರ ವಿಲೇವಾರಿ ಮಾಡಲಿದ್ದಾರೆ.

ADVERTISEMENT

ಭ್ರಷ್ಟ ವ್ಯವಸ್ಥೆ ಹಾಗೂ ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರಪ್ಪ, ‘ಅಧಿಕಾರ ಶಾಶ್ವತ ಅಲ್ಲ. ಅಧಿಕಾರವಿದೆ ಎಂದು ದರ್ಪ‌ ತೋರಬೇಡಿ. ಮಾಡಿದ ಪಾಪ ತಮ್ಮನ್ನು ಬಿಡಲ್ಲ. ಅಂಥವರು ಇದ್ದೂ ಸತ್ತಂತೆ. ಆತ್ಮಸಾಕ್ಷಿ ಇರುವ ಯಾರೂ ಲಂಚ ಕೇಳಲ್ಲ. ನಮ್ಮ ಅನ್ನದ ಜೊತೆ ಬೇರೆ ಅನ್ನ ಮಿಶ್ರಣವಾದರೆ ಅದು ವಿಷವಾಗುತ್ತದೆ’ ಎಂದರು.

ಸರ್ಕಾರಿ ಅಧಿಕಾರಿಗಳು ಪಡೆಯುವ ಸಂಬಳ ಸಾರ್ವಜನಿಕರ ತೆರಿಗೆಯ ಹಣ ಎಂಬುದನ್ನು ಮರೆಯಬಾರದು. ಕೆಲ ಅಧಿಕಾರಿಗಳು ಲಂಚದ ಪರವಾನಗಿ ಪಡೆದುಕೊಂಡಂತೆ ವರ್ತಿಸುತ್ತಾರೆ. ಸರ್ಕಾರಿ ಕೆಲಸವೆಂದರೆ ಅದು ಸಾರ್ವಜನಿಕ ಸೇವೆಗೆ ಸಿಕ್ಕ ಪರವಾನಗಿಯೇ ಹೊರತು, ಲಂಚ ಪಡೆಯಲು ಸಿಕ್ಕ ಅವಕಾಶವಲ್ಲ ಎಂದು ಕಟುವಾಗಿ ಎಚ್ಚರಿಸಿದರು.

ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಲೋಕಾಯುಕ್ತಕ್ಕೆ ಸಾರ್ವಜನಿಕರು ನೀಡಿರುವ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದರೂ ಭ್ರಷ್ಟಾಚಾರದ 'ಭೂತ' ಇಂದಿಗೂ ಕಾಡುತ್ತಿದೆ. ಈ ಪಿಡುಗನ್ನು ತೊಲಗಿಸಿದರೆ ಭಾರತ ಜಗತ್ತಿನಲ್ಲೇ ನಂಬರ್ ಒನ್ ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಎದುರಾದರೆ, ಲೋಕಾಯುಕ್ತ ಸಂಸ್ಥೆಯು ಅಂಥವರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಲೋಕಾಯುಕ್ತಕ್ಕೆ ಬರುವ ಸುಮಾರು 25 ಸಾವಿರ ಪ್ರಕರಣಗಳಲ್ಲಿ ಅಂದಾಜು 8 ಸಾವಿರ ಪ್ರಕರಣಗಳು ಸುಳ್ಳು ದೂರುಗಳಾಗಿರುತ್ತವೆ. ಇಂತಹ ಸುಳ್ಳು ದೂರುದಾರರ ವಿರುದ್ಧ ಕಠಿಣ
ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ದೂರುಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಚುನಾವಣೆ ಸಂದರ್ಭದಲ್ಲಿ ಹಣಕ್ಕೆ ಮತ ಮಾರಿಕೊಳ್ಳುವುದು ಇಂದಿಗೂ ಜೀವಂತವಾಗಿರುವುದು 'ಗುಲಾಮಗಿರಿ'ಯ ಸಂಕೇತವಾಗಿದೆ. ಇದರಿಂದಾಗಿ ಸಮರ್ಥ ನಾಯಕರು ಆಯ್ಕೆಯಾಗುತ್ತಿಲ್ಲ ಎಂದು ಬೇಸರ
ವ್ಯಕ್ತಪಡಿಸಿದರು.

ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯ ಅರವಿಂದ್‌, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಕಾನೂನು ಸೇವೆಗಳು
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್, ಜಿಲ್ಲಾ ಅರಣ್ಯ
ಸಂರಕ್ಷಣಾ ಅಧಿಕಾರಿ ಸರೀನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಕೋಲಾರ ಲೋಕಾಯುಕ್ತ ಅಧೀಕ್ಷಕ ಅಂಥೋಣಿ ಜಾನ್, ಲೋಕಾಯುಕ್ತ ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ, ಎಲ್ಲಾ ತಾಲ್ಲೂಕು ತಹಶೀಲ್ದಾರ್‌ಗಳು, ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು, ದೂರುದಾರರು, ಸಾರ್ವಜನಿಕರು ಇದ್ದರು.

ಕೋಲಾರದಲ್ಲಿ ಬುಧವಾರ ಉಪಲೋಕಾಯುಕ್ತ ಬಿ.ವೀರಪ್ಪ ದೂರುಗಳ ವಿಚಾರಣೆ ಹಾಗೂ ಬಾಕಿ ದೂರುಗಳ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿದರು (ಎಡಚಿತ್ರ) ದೂರುದಾರರು ಹಾಗೂ ಅಧಿಕಾರಿಗಳಿಂದ ಉಪಲೋಕಾಯುಕ್ತರಿಗೆ ವಿವರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.