
ಮಾಲೂರು: ತಾಲ್ಲೂಕಿನಲ್ಲಿ 2021-22ನೇ ಸಾಲಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ (ಪಿಆರ್‌ಇಡಿ) ವತಿಯಿಂದ ನಡೆದ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ನಿರ್ಮಾಣವಾದ ರಸ್ತೆ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕಾಮಗಾರಿಗಳ ಬಳಿ ನಾಮಫಲಕ ಅಳವಡಿಸಿಲ್ಲ ಹಾಗೂ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ರೂಟ್ಸ್ ಫಾರ್ ಫ್ರೀಡಂ ಸಂಘಟನೆ ರಾಜ್ಯ ಸಂಚಾಲಕ ರಾಮಚಂದ್ರಪ್ಪ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ದೂರಿನನ್ವಯ ಬುಧವಾರ ಬೆಳಗ್ಗೆ ತಾಲ್ಲೂಕಿಗೆ ಆಗಮಿಸಿದ ಲೋಕಾಯುಕ್ತ ತನಿಖಾಧಿಕಾರಿಗಳ ತಂಡ, ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ಎನ್.ದೊಡ್ಡಿ ಗ್ರಾಮದ ಪಶು ಆಸ್ಪತ್ರೆ ಕಾಪೌಂಡ್ ಕಾಮಗಾರಿ. ದಿನ್ನಹಳ್ಳಿ ರಸ್ತೆಯಿಂದ- ತೊಳಕನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ. ತೊಳಕನಹಳ್ಳಿಯಿಂದ - ದಿನ್ನಹಳ್ಳಿ ಮುಖ್ಯರಸ್ತೆವರೆಗೆ ಅಭಿವೃದ್ಧಿ ಕಾಮಗಾರಿ. ಕೋಲಾರ ರಸ್ತೆಯಿಂದ- ಕರಡಗುರ್ಕಿ ರಸ್ತೆ ಅಭಿವೃದ್ಧಿ ಕಾಮಗಾರಿ. ಅನಂತಪುರ ರಸ್ತೆಯಿಂದ-ಕರಡಗುರ್ಕಿ ರಸ್ತೆ ಅಭಿವೃದ್ಧಿ ಕಾಮಗಾರಿ. ಬ್ಯಾಟರಾಯನಹಳ್ಳಿ ದೇವಾಸ್ಥಾನ. ಕೆಸರಗೆರೆ ಗ್ರಾಮದ ಹಾಲಿನ ಡೇರಿ ಕಾಮಗಾರಿ. ಬನಹಳ್ಳಿ ಗ್ರಾಮದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ. ಪಡವನಹಳ್ಳಿ ಕ್ರಾಸ್‌ನಿಂದ ಡಿ.ಎನ್.ದೊಡ್ಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಬಳಿ ಸ್ವತಃ ಭೇಟಿ ಕಾಮಗಾರಿಯ ಗುಣಮಟ್ಟ, ಬಳಸಲಾದ ಸಾಮಗ್ರಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಲೋಕಾಯುಕ್ತ ತನಿಖಾಧಿಕಾರಿ ಪ್ರಸನ್ನ ಕುಮಾರ್, ಲೋಕಾಯುಕ್ತ ಪೊಲೀಸ್ ಶಿವಶಂಕರ್, ಗುಣಮಟ್ಟ ಪರಿಶೀಲನಾಧಿಕಾರಿ ವಿದ್ಯಾಶ್ರೀ, ಪಿ.ಆರ್.ಇ.ಡಿ. ಇಲಾಖೆಯ ನಿವೃತ್ತ ಎಇಇ ಜಿ.ನಾರಾಯಣಸ್ವಾಮಿ, ನಿವೃತ್ತ ಎಇಇ ವಿಶ್ವನಾಥ ರೆಡ್ಡಿ, ಎಇ ದೇವರಾಜು, ಎ.ಇ. ಹರಿನಾಥ್, ಇಮ್ರಾನ್, ಇಇ ರವೀಂದ್ರ, ರಾಮಚಂದ್ರಪ್ಪ, ಮುನಿರಾಜು, ಇಂದು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.