ADVERTISEMENT

ಬಂಗಾರಪೇಟೆ: ಕಾಮಗಾರಿ ಗುಣಮಟ್ಟ ಪ್ರಶ್ನಿಸಿದ್ದಕ್ಕೆ ಲಾಂಗ್ ತೋರಿಸಿದ ಗುತ್ತಿಗೆದಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 16:28 IST
Last Updated 12 ಸೆಪ್ಟೆಂಬರ್ 2019, 16:28 IST
   

ಬಂಗಾರಪೇಟೆ (ಕೋಲಾರ ಜಿಲ್ಲೆ): ಉದ್ಯೋಗ ಖಾತ್ರಿ (ನರೇಗ) ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಶ್ನಿಸಿದವರನ್ನು ತಾಲ್ಲೂಕಿನ ಸಕ್ಕನಹಳ್ಳಿಗ್ರಾಮ ಪಂಚಾಯತಿ ಸದಸ್ಯಲಾಂಗ್ ತೋರಿಸಿ ಬೆದರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಗ್ರಾಮದ ಸೋಮಶೇಖರರೆಡ್ಡಿ ವಿರುದ್ಧ ಕುಪೇಂದ್ರ ಎಂಬುವವರು ಪಟ್ಟಣ ಠಾಣೆಗೆ ಇಂದು (ಸೆ.12) ದೂರು ನೀಡಿದ್ದಾರೆ. ಸೆ.10 ರಂದು ಸೋಮಶೇಖರ ರೆಡ್ಡಿ ತನ್ನನ್ನು ಪ್ರಶ್ನಿಸಿದವರನ್ನು ಬೆದರಿಸಲು ಲಾಂಗ್ ಹಿಡಿದು ಗ್ರಾಮದಲ್ಲಿ ಓಡಾಡಿದ್ದಾರೆ ಎನ್ನಲಾದ ದೃಶ್ಯಗಳು ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿದೆ. ತಾಲ್ಲೂಕಿನಲ್ಲಿ ಬಿಸಿಬಿಸಿ ಚರ್ಚೆಗೂ ಗ್ರಾಸವಾಗಿದೆ.

ಜಾತಿ ನಿಂದನೆ ಮಾಡಿ, ಲಾಂಗು, ಮಚ್ಚನ್ನು ಹಿಡಿದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕುಪೇಂದ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಸಕ್ಕನಹಳ್ಳಿ ಗ್ರಾಮದಲ್ಲಿ ಸೋಮಶೇಖರ ರೆಡ್ಡಿ ಅವರು ಮೂರು ತಿಂಗಳ ಹಿಂದೆ ನರೇಗ ಯೋಜನೆಯಡಿ ಕೆಲಸ ಮಾಡಿಸಿದ್ದರು. ಆ ಸಂದರ್ಭ ಕೆಲಸ ಮಾಡಿದ ಜಾಗದಲ್ಲಿ ಸಿಕ್ಕಿದ್ದ ಕಲ್ಲುಗಳು, ಕಲ್ಲು ಚಪ್ಪಡಿಗಳನ್ನು ಪಂಚಾಯಿತಿಗೆ ನೀಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ' ಎಂದು ದೂರಿನಲ್ಲಿ ಹೇಳಲಾಗಿದೆ.

'ಗ್ರಾಮದ ಬಡವರಿಗೆ ಜಾಬ್ ಕಾರ್ಡ್ ವಿತರಿಸದೆ ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಕೂಲಿಯವರನ್ನು ಬಳಸದೆ ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಸೋಮಶೇಖರ ರೆಡ್ಡಿ, ಸಂತೋಷ್‌ರೆಡ್ಡಿ, ಬಾಬು ರೆಡ್ಡಿ, ಮಂಜುಳಾ ಅವರು ಪ್ರಾಣ ಬೆದರಿಕೆ ಹಾಕಿದ್ದಾರೆ' ಎಂದು ಕುಪೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.