ADVERTISEMENT

ಲಾಟರಿ ಆಮಿಷ: ಮಕ್ಕಳ ಅಪಹರಣ ಯತ್ನ

ಸ್ಥಳೀಯರಿಗೆ ಸಿಕ್ಕಿಬಿದ್ದ ಆರೋಪಿಗಳು: ಹಿಗ್ಗಾಮುಗ್ಗಾ ಥಳಿತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 16:04 IST
Last Updated 15 ಸೆಪ್ಟೆಂಬರ್ 2021, 16:04 IST
ಕೋಲಾರದ ರಹಮತ್‌ನಗರಲ್ಲಿ ಬುಧವಾರ ಲಾಟರಿ ಆಮಿಷವೊಡ್ಡಿ ಮಕ್ಕಳನ್ನು ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳ ಕಾರಿನ ಮೇಲೆ ಸ್ಥಳೀಯರು ಕಲ್ಲು ತೂರಿ ಕಿಟಕಿ ಗಾಜು ಪುಡಿ ಮಾಡಿರುವುದು
ಕೋಲಾರದ ರಹಮತ್‌ನಗರಲ್ಲಿ ಬುಧವಾರ ಲಾಟರಿ ಆಮಿಷವೊಡ್ಡಿ ಮಕ್ಕಳನ್ನು ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳ ಕಾರಿನ ಮೇಲೆ ಸ್ಥಳೀಯರು ಕಲ್ಲು ತೂರಿ ಕಿಟಕಿ ಗಾಜು ಪುಡಿ ಮಾಡಿರುವುದು   

ಕೋಲಾರ: ನಗರದ ರಹಮತ್‌ನಗರದಲ್ಲಿ ಬುಧವಾರ ಲಾಟರಿ ಆಮಿಷವೊಡ್ಡಿ ಮಕ್ಕಳನ್ನು ಅಪಹರಿಸಿ ಪರಾರಿಯಾಗುವ ಯತ್ನದಲ್ಲಿದ್ದ ಆರೋಪಿಗಳನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಗಲ್‌ಪೇಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

5 ಮಂದಿ ಅಪರಿಚಿತರು ರಹಮತ್‌ನಗರದಲ್ಲಿ ಬಲ್ಬ್‌ಗಳನ್ನು ಮಾರಿ, ಗ್ರಾಹಕರಿಗೆ ಲಾಟರಿಯ ಕೂಪನ್‌ ಕೊಡುವುದಾಗಿ ತಿಳಿಸಿದ್ದರು. ₹ 100 ಮುಖಬೆಲೆಯ ಬಲ್ಬ್‌ ಖರೀದಿಸಿದರೆ ಲಾಟರಿಯಲ್ಲಿ ಕುಕ್ಕರ್‌, ಲೈಟರ್‌, ಟಾರ್ಚ್‌, ಥರ್ಮಲ್‌ ಪ್ಲಾಸ್ಕ್‌, ಮಿಕ್ಸಿಯನ್ನು ಬಹುಮಾನವಾಗಿ ಕೊಡುತ್ತೇವೆ ಎಂದು ಆರೋಪಿಗಳು ಗ್ರಾಹಕರಿಗೆ ಸುಳ್ಳು ಹೇಳಿ ನಂಬಿಸಿದ್ದರು.

‘ಕೂಪನ್‌ಗಳು ಕಾರಿನಲ್ಲಿವೆ. ಮಕ್ಕಳನ್ನು ಜತೆಯಲ್ಲಿ ಕಳುಹಿಸಿದರೆ ಕೂಪನ್‌ ಕೊಟ್ಟು ಲಾಟರಿ ಮೂಲಕ ಬಹುಮಾನ ನೀಡುತ್ತೇವೆ’ ಎಂದು ಆರೋಪಿಗಳು ಗ್ರಾಹಕರಿಗೆ ಭರವಸೆ ನೀಡಿ 5 ಮಕ್ಕಳನ್ನು ಜತೆಯಲ್ಲಿ ಕರೆದೊಯ್ದಿದ್ದರು. ಮಕ್ಕಳು ಮನೆಗೆ ವಾಪಸ್‌ ಬಾರದಿದ್ದರಿಂದ ಆತಂಕಗೊಂಡ ಪೋಷಕರು ಬಡಾವಣೆ ಸುತ್ತಮುತ್ತ ಹುಡುಕಾಡಿದರೂ ಮಕ್ಕಳು ಪತ್ತೆಯಾಗಲಿಲ್ಲ.

ADVERTISEMENT

ಅರಹಳ್ಳಿ ಗೇಟ್‌ ಬಳಿ ಆರೋಪಿಗಳು ಮಕ್ಕಳ ಮೇಲೆ ಹಲ್ಲೆ ನಡೆಸಿ ಕಾರಿನ ಬಳಿಗೆ ಎಳೆದೊಯ್ಯುತ್ತಿರುವುದನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಅವರನ್ನು ಹಿಡಿಯಲು ಯತ್ನಿಸಿದ್ದಾರೆ. ಇದರಿಂದ ಗಾಬರಿಯಾದ ಆರೋಪಿಗಳ ಪೈಕಿ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಉಳಿದ ಮೂವರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಮತ್ತು ಅವರ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಆರೋಪಿಗಳ ವಶದಲ್ಲಿದ್ದ 5 ಮಕ್ಕಳನ್ನು ರಕ್ಷಿಸಿ ಪೋಷಕರ ಮಡಿಲು ಸೇರಿಸಿದ್ದಾರೆ.

‘ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಕ್ಕಳ ರಕ್ಷಣೆಯಾಗಿದೆ. ಸಿಕ್ಕಿ ಬಿದ್ದಿರುವ ಆರೋಪಿಗಳು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಅವರ ಪೂರ್ವಾಪರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.