ಮಾಲೂರು (ಕೋಲಾರ): ಪೋಷಕರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಬಹುದು ಎಂಬ ಆತಂಕದಲ್ಲಿ ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲು ನಿಲ್ದಾಣ ಬಳಿ ಗುರುವಾರ ಯುವ ಪ್ರೇಮಿಗಳು ರೈಲಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟೇಕಲ್ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಸತೀಶ್ (18) ಹಾಗೂ ಪನಮಾಕನಹಳ್ಳಿ ಗ್ರಾಮದ ಶ್ವೇತಾ (17) ಆತ್ಮಹತ್ಯೆ ಮಾಡಿಕೊಂಡವರು.
ಒಂದು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಶೇತಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಸತೀಶ್ ತಿಗಳರ ಸಮುದಾಯದವರು ಎಂಬುದು ಗೊತ್ತಾಗಿದೆ. ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೆ ಮುಂದೆ ಕಷ್ಟವಾಗಬಹುದು ಎಂಬ ಭಯದಲ್ಲಿ ಈ ಕೃತ್ಯ ಎಸಗಿಕೊಂಡಿದ್ದಾರೆ ಎನ್ನಲಾಗಿದೆ.
ರೈಲು ನಿಲ್ದಾಣದಲ್ಲಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ, ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಪರಸ್ಪರ ತಬ್ಬಿಕೊಂಡು ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ನಿಲುಗಡೆ ಮಾಡುವಷ್ಟರಲ್ಲಿ ದೇಹ ಛಿದ್ರಗೊಂಡಿತ್ತು.
ಸತೀಶ್ ಬುಧವಾರವಷ್ಟೇ ತಮ್ಮ 18ನೇ ಜನ್ಮದಿನ ಆಚರಿಸಿಕೊಂಡಿದ್ದರು. ಶ್ವೇತಾ ಮಾಲೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದರು. ಐಟಿಐ ಮುಗಿಸಿ ಕೆಲಸ ಹುಡುಕುತ್ತಿದ್ದ ಸತೀಶ್, ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಬೆಳಿಗ್ಗೆ ಮನೆಯಿಂದ ಹೊರಟಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರಿನ ದಂಡು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.