ಮಾಲೂರು: ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಸೂರಿನ ಭಾಗ್ಯವಿಲ್ಲದೆ ಮಾದನಹಟ್ಟಿ ಗ್ರಾಮದ ಕಾಲೊನಿ ಬಡ ಕುಟುಂಬಗಳು ಹೈರಾಣಿಗಿದ್ದಾರೆ.
ತಾಲ್ಲೂಕಿನ ನೊಸಗೆರೆ ಗ್ರಾ.ಪಂ.ವ್ಯಾಪ್ತಿಯ ಮಾದನಟ್ಟಿ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರು ವಾಸವಾಗಿದ್ದು, ಕಾಲೊನಿಯಲ್ಲಿ 40–50 ವರ್ಷಗಳಿಂದ ಸೂರಿಲ್ಲದೆ ಗುಡಿಸಲಿನಲ್ಲಿ ಬಡ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ.
ಮಾದನಹಟ್ಟಿ ಗ್ರಾಮದಲ್ಲಿ 600 ಮತದಾರರಿದ್ದು, ಸುಮಾರು 140 ರಿಂದ 150 ಕುಟುಂಬಗಳಿವೆ. ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸರ್ಕಾರಿ ಶಾಲೆ ಮುಂಭಾಗದಲ್ಲಿ ತಿಪ್ಪೆಗುಂಡಿಗಳು ಎದ್ದು ಕಾಣುತ್ತಿವೆ.
ಪಂಚಾಯಿತಿ ವತಿಯಿಂದ ಎರಡ್ಮೂರು ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೈಪ್ ಮೂಲಕ ಸರಬರಾಜು ಮಾಡುತ್ತಿರುವುದು ಹೊರತು ಪಡಿಸಿದರೆ. ಗ್ರಾಮಕ್ಕೆ ಯಾವುದೇ ಮೂಲ ಸೌಲಭ್ಯ ಇಲ್ಲದಂತಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಮಾದನಹಟ್ಟಿ ಗ್ರಾಮದ ಕಾಲೊನಿಯಲ್ಲಿ ಸುಮಾರು 30 ರಿಂದ 40 ಕುಟುಂಬಗಳಿದ್ದು, ಒಂದೆರಡು ಮನೆ ಹೊರತುಪಡಿಸಿ ಉಳಿದೆಲ್ಲಾ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇವರ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರ ಕಾಲೊನಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದೆ. ಆದರೆ, ಮಾದನಹಟ್ಟಿ ಕಾಲೊನಿ ಜನಕ್ಕೆ ಯಾವುದೇ ಸೌಕರ್ಯ ಸಿಗುತ್ತಿಲ್ಲ ಎಂಬುದು ಕಾಲೊನಿ ಜನರ ಸಂಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.