ADVERTISEMENT

ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 13:32 IST
Last Updated 19 ಜನವರಿ 2020, 13:32 IST
ಕೋಲಾರದ ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಕೇಂದ್ರಗಳಿಗೆ ಉಚಿತ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಶ್ರದ್ಧಾಕೇಂದ್ರಗಳಿಗೆ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಕಸದ ಬುಟ್ಟಿ ವಿತರಿಸಿದರು.
ಕೋಲಾರದ ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಕೇಂದ್ರಗಳಿಗೆ ಉಚಿತ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಶ್ರದ್ಧಾಕೇಂದ್ರಗಳಿಗೆ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಕಸದ ಬುಟ್ಟಿ ವಿತರಿಸಿದರು.   

ಕೋಲಾರ: ‘ಸಂಘಸಂಸ್ಥೆಗಳ ಜತೆಗೆ ಸಾರ್ವಜನಿಕರು ಸ್ವಚ್ಛತೆ ಆದ್ಯತೆ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಮನವಿ ಮಾಡಿದರು.

ನಗರದ ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಕೇಂದ್ರಗಳಿಗೆ ಉಚಿತ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಮಾಡಲು ನಾಗರಿಕರು ಸರ್ಕಾರಗಳ ಮೇಲೆ ಅವಲಂಬನೆಯಾಗುವುದು ವಿಷಾದಕರ ಸಂಗತಿ’ ಎಂದರು.

‘ಮನುಷ್ಯ ಜೀವನದಲ್ಲಿ ದೇವರಿಗೆ ನೀಡುವಷ್ಟು ಆದ್ಯತೆ, ಸ್ವಚ್ಛತೆಗೂ ಅಷ್ಟೇ ಆದ್ಯತೆ ನೀಡಬೇಕು. ಸ್ವಚ್ಛತೆ ವಿಷಯದಲ್ಲಿ ತೀರಾ ಹಿಂದುಳಿದಿದ್ದೆ. ಸ್ವಚ್ಛತೆಯ ಬಗ್ಗೆ ಅರಿವು ಪಡೆದುಕೊಂಡು ಪ್ರತಿಯೊಬ್ಬರೂ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಗರ ಸ್ವಚ್ಛತೆಗೆ ಅಪವಾದವಾಗಿ ಇರುಸುಮುರುಸು ಉಂಟುಮಾಡಿದೆ. ಇಲ್ಲಿ ಸ್ವಚ್ಛತೆ ಹೇಳಿ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರ ಸಂಖ್ಯೆ ಹೆಚ್ಚಿದ್ದರೂ ಸ್ವಚ್ಛತೆಯಲ್ಲಿ ಯಾಕೆ ಹಿಂದುಳಿದಿದ್ದೆವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಯುವ ಶಕ್ತಿ ಸದ್ಬಳಕೆಯಾದರೆ ಭಾರತ ವಿಶ್ವದಲ್ಲೇ ಬಲಿಷ್ಟವಾಗುವುದರಲ್ಲಿ ಅನುಮಾನವಿಲ್ಲ’ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ‘ಜಿಲ್ಲೆಯಲ್ಲಿ ೩೧೪ ಶ್ರದ್ಧಾಕೇಂದ್ರಗಳಿದ್ದು, ತಲಾ 2ಕಸದ ಬುಟ್ಟಿಗಳನ್ನು ನೀಡಲಾಗುತ್ತಿದೆ. ಎಲ್ಲ ಶ್ರದ್ಧಾಕೇಂದ್ರಗಳಲ್ಲಿ ಕಸದ ಬುಟ್ಟಿಗಳನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಇಟ್ಟು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಸ್ವಚ್ಛತೆ ಹೇಗಿರಬೇಕೆಂಬುದನ್ನು ಧರ್ಮಸ್ಥಳ ನೋಡಿ ಕಲಿಯಿರಿ ಎಂದು ಸುಪ್ರಿಂ ಕೋರ್ಟ್ ಈ ಹಿಂದೆ ಹೇಳಿತ್ತು. ಶ್ರದ್ಧೆ, ಶಿಸ್ತು, ಸ್ವಚ್ಛತೆ ಇದ್ದಲ್ಲಿ ದೇವರು ನೆಲೆಸಿರುತ್ತಾರೆ. ಈ ವಾತಾವರಣವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾಣಬಹುದು’ ಎಂದರು.

‘ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು 2ಕೋಟಿ ರು. ವೆಚ್ಚದಲ್ಲಿ ರಾಜ್ಯದ 9000ಶ್ರದ್ಧಾಕೇಂದ್ರಗಳಿಗೆ ಕಸದ ಬುಟ್ಟಿಗಳನ್ನು ನೀಡುತ್ತಿದ್ದಾರೆ. ಹಲವು ದಶಕಗಳ ಪ್ರಯತ್ನದ ನಂತರ ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಸ್ವಚ್ಛ ಭಾರತ್ ಮೂಲಕ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ಭಾರತ ಸ್ವಚ್ಛ ರಾಷ್ಟ್ರವಾಗುವುದು ಖಚಿತ’ ಎಂದು ಅಭಿಪ್ರಾಯಪಟ್ಟರು.

ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್, ಜನಜಾಗೃತಿ ಸಮಿತಿ ಸದಸ್ಯರಾದ ನಂಜುಂಡಯ್ಯ, ಅರುಣಮ್ಮ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.