ADVERTISEMENT

ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ

ಬೆಂಗಳೂರು ಉತ್ತರ ವಿ.ವಿ ಕುಲಪತಿ ಕೆಂಪರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 16:30 IST
Last Updated 11 ಡಿಸೆಂಬರ್ 2019, 16:30 IST
ಕೋಲಾರದಲ್ಲಿ ಬುಧವಾರ ನಡೆದ ‘ಮಾಧ್ಯಮ ಮತ್ತು ರಾಜಕಾರಣದಲ್ಲಿನ ಅಸಂಘಟಿತ ಲಿಂಗಾಧಾರಿತ ವ್ಯವಸ್ಥೆ’ ಕುರಿತ ಚಿಂತನಾ ಮಂಥನ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಉದ್ಘಾಟಿಸಿದರು.
ಕೋಲಾರದಲ್ಲಿ ಬುಧವಾರ ನಡೆದ ‘ಮಾಧ್ಯಮ ಮತ್ತು ರಾಜಕಾರಣದಲ್ಲಿನ ಅಸಂಘಟಿತ ಲಿಂಗಾಧಾರಿತ ವ್ಯವಸ್ಥೆ’ ಕುರಿತ ಚಿಂತನಾ ಮಂಥನ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಉದ್ಘಾಟಿಸಿದರು.   

ಕೋಲಾರ: ‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಜವಾಬ್ದಾರಿ ಅರಿತು ಉತ್ತಮ ಸಮಾಜ ನಿರ್ಮಿಸಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಉತ್ತರ ವಿ.ವಿಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾಧ್ಯಮ ಮತ್ತು ರಾಜಕಾರಣದಲ್ಲಿನ ಅಸಂಘಟಿತ ಲಿಂಗಾಧಾರಿತ ವ್ಯವಸ್ಥೆ’ ಕುರಿತ ಚಿಂತನಾ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಯುವ ಮಾನವ ಸಂಪನ್ಮೂಲವು ದೇಶದ ವಿಶೇಷ ಸಂಪತ್ತು. ಈ ಸಂಪತ್ತನ್ನು ಬಳಸಿಕೊಂಡು ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಬೇಕು’ ಎಂದರು.

‘ಪ್ರತಿಯೊಬ್ಬರಲ್ಲೂ ಹೊಸ ಚಿಂತನೆ, ಆಲೋಚನೆಗಳಿವೆ. ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸಬೇಕಿದೆ. ವಿದ್ಯಾರ್ಥಿ ಸಮೂಹ ದೇಶದ ಮತ್ತು ಸಮಾಜದ ಸಮಸ್ಯೆ ಬಗೆಹರಿಸಬೇಕು. ಬೌದ್ಧಿಕ ವಿಚಾರಗಳನ್ನು ಸಾರ್ವಜನಿಕರ ಮಧ್ಯೆ ವಿಸ್ತರಿಸಬೇಕು. ವಿ.ವಿಗಳಲ್ಲಿ ನಿರಂತರವಾಗಿ ಪಠ್ಯೇತರ ಚಟುವಟಿಕೆ ನಡೆಸಬೇಕು. ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನ ಹಾಗೂ ವಿಷಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು. ಸಾಮಾಜಿಕ ಕಳಕಳಿಯಿಂದ ವರ್ತಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸಮಾನ ಹಕ್ಕುಗಳಿದ್ದು, ಸಾಮಾಜಿಕವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂಗ ತಾರತಮ್ಯ: ‘ಕುಟುಂಬಗಳಲ್ಲಿ ಮೊದಲು ಬದಲಾವಣೆ ತಂದು ಅರಿವು ಮೂಡಿಸುವುದರಿಂದ ಲಿಂಗ ತಾರತಮ್ಯ ನಿವಾರಿಸಬಹುದು. ಸಾಮಾಜಿಕ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಎಲ್ಲರನ್ನೂ ವಿದ್ಯಾವಂತರಾಗಿ ಮಾಡಬೇಕು’ ಎಂದು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಎಂ.ನಾರಾಯಣ ಹೇಳಿದರು.

‘12ನೇ ಶತಮಾನದಿಂದಲೂ ಲಿಂಗ ತಾರತಮ್ಯ ನಡೆಯುತ್ತಿದೆ. ಇದನ್ನು ವೈಭವೀಕರಿಸದೆ ಹಿಂದಿನ ಸಾಂಪ್ರದಾಯಿಕ ಆಚಾರ ವಿಚಾರದಲ್ಲಿ ಬದಲಾವಣೆ ತರಬೇಕು’ ಎಂದು ಬೆಂಗಳೂರು ವಿ.ವಿ ಆಂಗ್ಲ ವಿಭಾಗದ ಮುಖ್ಯಸ್ಥೆ ವೈಶಾಲಿ ತಿಳಿಸಿದರು.

‘ಮಹಿಳೆಯರು ಎಲ್ಲಾ ರಂಗದಲ್ಲೂ ಮೂಂಚೂಣಿಯಲ್ಲಿದ್ದಾರೆ. ಆದರೆ, ಅವರ ಸ್ಥಿತಿಗತಿ ಹಿಂದಿನಂತೆಯೇ ಇದೆ. ರಾಜಕೀಯದಲ್ಲಿ ಮಹಿಳೆಗೆ ಮೀಸಲಾತಿ ಇದ್ದರೂ ಪುರುಷರ ದಬ್ಬಾಳಿಕೆ ಮಾತ್ರ ಕಡಿಮೆಯಾಗಿಲ್ಲ’ ಎಂದುಪತ್ರಕರ್ತೆ ಸಿ.ಜಿ.ಮಂಜುಳಾ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಿ.ಕುಮುದಾ, ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ದೀಕ್ಷಿತ್‌ಕುಮಾರ್, ಸಂವಹನ ವಿಭಾಗದ ಉಪನ್ಯಾಸಕಿ ಎ.ವಿ.ಸಂಪ್ರತಿ, ಆಂಗ್ಲ ವಿಭಾಗದ ಉಪನ್ಯಾಸಕಿ ಬೀನಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.