
ಮಾಲೂರು: ‘ಮತ ಎಣಿಕೆ ಕಾರ್ಯ ಮುಗಿದ ಬಳಿಕ ದಾಖಲಾತಿಗಳನ್ನು ಜಿಲ್ಲಾ ಕೇಂದ್ರದಲ್ಲಿನ ಭದ್ರತಾ ಕೊಠಡಿಗೆ ನೀಡಬೇಕು. ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇರುತ್ತದೆ, ಭದ್ರತೆ ಇರುತ್ತದೆ. ಆದರೆ, 17(ಸಿ) ಭಾಗ– 2 ದಾಖಲಾತಿಗಳನ್ನು ನಿಯಮ ಮೀರಿ ಮಾಲೂರು ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇಟ್ಟಿಕೊಂಡಿದ್ದಾರೆ. ಇಲ್ಲಿ ಯಾವುದೇ ಸೌಲಭ್ಯ ಇಲ್ಲ’ ಎಂದು ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ಆರೋಪಿಸಿದರು.
ಜಿಲ್ಲಾ ಚುನಾವಣಾಧಿಕಾರಿ ನೀಡಿರುವ ನೋಟಿಸ್‌ನಂತೆ ಖಜಾನೆ ಪರಿಶೀಲನೆಗೆಂದು ಮಂಗಳವಾರ ನಗರದ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರು ಮಾತನಾಡಿದರು.
‘ಈ ಖಜಾನೆಯಲ್ಲಿ ಸಿ.ಸಿ.ಟಿ.ವಿ ಇಲ್ಲ, ಬೀಗ ಸಹ ಹಾಕಿಲ್ಲ. ಒಂದು ಪೇಪರ್ ಅಂಟಿಸಿದ್ದಾರೆ. ಯಾವಾಗ ಬೇಕಾದರೂ ತೆಗೆಯಬಹುದು, ಯಾವಾಗ ಬೇಕಾದರೂ ಅಂಟಿಸಬಹುದು. 17 (ಸಿ) ಭಾಗ– 2 ಫಾರಂಗಳ ಮೂಲ ಪ್ರತಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎಲ್ಲಿಂದ ತೆಗೆದುಕೊಟ್ಟರು, ಮಾಲೂರು ಖಜಾನೆಗೆ ಹೇಗೆ ಬಂದಿದ್ದವು? ಅದು ಜಿಲ್ಲಾಧಿಕಾರಿ ಕಚೇರಿಯ ಭದ್ರತಾ ಕೊಠಡಿಯಲ್ಲಿ ಇರಬೇಕಿತ್ತು’ ಎಂದು ಸಂಶಯ ವ್ಯಕ್ತಪಡಿಸಿದರು.
ಭದ್ರತಾ ಕೊಠಡಿಯ ಬಾಗಿಲು ತೆಗೆದಿದ್ದು ಒಂದೇ ಸಲ. ಅಂದು ಈ ದಾಖಲೆಗಳು ಅಲ್ಲಿ ಇರಲಿಲ್ಲ. ಇಲ್ಲಿ ಏನು ನಡೆದಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಮರು ಮತ ಎಣಿಕೆಗೆ ಪ್ರತಿ ದಾಖಲೆ ಕೂಡ ಮುಖ್ಯವಾಗುತ್ತದೆ. ಎಣಿಕೆ ವೇಳೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವಿಡಿಯೊ ಮಾಡಿಸಿದ್ದು ಕೂಡ ಇಲ್ಲ. ಮರು ಎಣಿಕೆ ವೇಳೆ ಅವರು ಹೇಳಿದ್ದನ್ನು ಕೇಳಿಕೊಂಡು ಬರಬೇಕೇ ಎಂದು ಪ್ರಶ್ನಿಸಿದರು.
‘ಇನ್ನೂ ಏನಾದರೂ ಲೋಪ ಆಗಿರಬಹುದು ಎಂಬ ಕಾರಣಕ್ಕೆ ಮುಚ್ಚಿದ ಲಕೋಟೆಯಲ್ಲಿ ಮರು ಎಣಿಕೆ ಫಲಿತಾಂಶವನ್ನು ಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಪ ಕಂಡು ಬಂದರೆ ಫಲಿತಾಂಶ ಪ್ರಕಟ ಮಾಡಬೇಕೇ ಅಥವಾ ಮರು ಚುನಾವಣೆ ಮಾಡಬೇಕೇ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧಾರ ಮಾಡುತ್ತದೆ’ ಎಂದರು.
ಮಾಲೂರು ತಾಲ್ಲೂಕು ಕಚೇರಿಯ ಉಪ ಖಜಾನೆಯಲ್ಲಿ ಫಾರಂ 17 (ಸಿ) ಪತ್ರಗಳನ್ನು ಇರಿಸಲಾಗಿದೆ ಎಂದು ಮಂಜುನಾಥಗೌಡ ಸೋಮವಾರ ಕೋಲಾರದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಖಜಾನೆ ಪರಿಶೀಲಿಸುವ ಸಂಬಂಧ ನೋಟಿಸ್ ಕೂಡ ನೀಡಲಾಗಿತ್ತು ಎಂಬುದು ಗೊತ್ತಾಗಿದೆ.
ಎಲ್ಲಾ ಅಭ್ಯರ್ಥಿಗಳು ಬಂದ ಮೇಲೆಯೇ ಖಜಾನೆಯಲ್ಲಿ ದಾಖಲೆ ಪರಿಶೀಲನೆ ನಡೆಯಲಿ. ಎಲ್ಲಾ ಅಭ್ಯರ್ಥಿಗಳಿಗೆ ವಿಚಾರ ಗೊತ್ತಾಗಲಿ. ನನ್ನ ಪ್ರಕಾರ ಮರು ಚುನಾವಣೆ ನಡೆಯುವ ಸಾಧ್ಯತೆ ಇದೆ.– ಕೆ.ಎಸ್.ಮಂಜುನಾಥಗೌಡ, ಬಿಜೆಪಿ ಮುಖಂಡ
ದಾಖಲೆ ಪರಿಶೀಲನೆಗೆ ಜಮಾವಣೆ
2023ರ ಮಾಲೂರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಮಾಲೂರು ನಗರದಲ್ಲಿರುವ ತಾಲ್ಲೂಕು ಕಚೇರಿಗೆ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಭೇಟಿ ನೀಡಿದ್ದರು. ಹೀಗಾಗಿ ತಾಲ್ಲೂಕು ಕಚೇರಿಯ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಜಮಾವಣೆ ಆಗಿದ್ದರು. ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಆದರೆ ಖಜಾನೆ ಪರಿಶೀಲನೆ ವಿಚಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಇನ್ನೂ ನೋಟಿಸ್ ನೀಡಿಲ್ಲವೆಂದು ಹೆಚ್ಚುವರಿ ಜಿಲ್ಲಾಧಿಕಾರಿ ನೀಡಿದ ಸೂಚನೆಯಂತೆ ಪರಿಶೀಲನೆಯನ್ನು ಮುಂದೂಡಿರುವುದಾಗಿ ತಹಶೀಲ್ದಾರ್ ರೂಪಾ ತಿಳಿಸಿದರು. ಎಲ್ಲಾ ಪಕ್ಷದವರಿಗೆ ನೋಟಿಸ್ ನೀಡಿ ಕಾನೂನು ಪ್ರಕಾರ ಪರಿಶೀಲನೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.