ADVERTISEMENT

ಮಾಲೂರು | ಗಣೇಶ ಹಬ್ಬ: ಕಾನೂನು ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:43 IST
Last Updated 20 ಆಗಸ್ಟ್ 2025, 5:43 IST
ಮಾಲೂರು ನಗರದ ಪೊಲೀಸ್ ಠಾಣೆ ಕಚೇರಿ ಆವರಣದಲ್ಲಿ ಹೆಚ್ಚುವರಿ ಎಸ್.ಪಿ ಜಗದೀಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆ
ಮಾಲೂರು ನಗರದ ಪೊಲೀಸ್ ಠಾಣೆ ಕಚೇರಿ ಆವರಣದಲ್ಲಿ ಹೆಚ್ಚುವರಿ ಎಸ್.ಪಿ ಜಗದೀಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆ   

ಮಾಲೂರು: ನಗರದ ಪೊಲೀಸ್ ಠಾಣೆ ಕಚೇರಿ ಆವರಣದಲ್ಲಿ ಗುರುವಾರ ಹೆಚ್ಚುವರಿ ಎಸ್.ಪಿ ಜಗದೀಶ್ ಹಾಗೂ ತಹಶೀಲ್ದಾರ್ ರೂಪ ಅವರ ನೇತೃತ್ವದಲ್ಲಿ ಮಂಗಳವಾರ ಗೌರಿ, ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ನಡೆಸಲಾಯಿತು.

ಸರ್ಕಲ್ ಇನ್‌ಸ್ಪೆಕ್ಟರ್ ವಸಂತಕುಮಾರ್ ಮಾತನಾಡಿ, ಸಾರ್ವಜನಿಕರು ಪಟ್ಟಣ ಸೇರಿದಂತೆ ತಾಲೂಕಿನ ಪತ್ರಿ ಗ್ರಾಮದಲ್ಲಿ ಗಣೇಶ ಹಬ್ಬದ ಅಂಗವಾಗಿ ಗಣೇಶ ಪತ್ರಿಮೆಗಳನ್ನು ಇಟ್ಟು ಪೂಜಿಸಲು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಯುವ ಶಕ್ತಿ ಸಮಾಜದ ನೆಮ್ಮದಿಗೆ ತೊಂದರೆಯಾಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಡಿಜೆ ಗಳ ಸೌಂಡ್ ಮೂಲಕ ಗಣೇಶ ಮೆರವಣಿಗೆ ಮಾಡಬಾರದು. 9 ದಿನಗಳ ಅವಧಿಯಲ್ಲಿ ಗಣೇಶ ಪ್ರತಿಮೆಗಳನ್ನು ವಿಸರ್ಜನೆ ಮಾಡಬೇಕು. ನಗರದಲ್ಲಿ ಗಣೇಶ್ ವಿಸರ್ಜನೆಗೆ ನಗರಸಭೆಯಿಂದ ಒಂದು ಸ್ಥಳವನ್ನು ನಿಗದಿ ಪಡಿಸಲಾಗುವುದು. ಪತ್ರಿಯೊಬ್ಬರು ನಿಯಮ ಪಾಲಿಸಬೇಕು ಎಂದರು.

ನಗರಸಭಾ ಸದಸ್ಯ ಪರಮೇಶ್, ತಹಶೀಲ್ದಾರ್ ಎಂ.ವಿ. ರೂಪ ಮಾತನಾಡಿ, ಗಣೇಶ ಹಬ್ಬ ಆಚರಣೆ ವೇಳೆ ಸರ್ಕಾರದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಒಂದೇ ಕಡೆ ಪರಿಸರ ಸ್ನೇಹಿ ಗಣಪತಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ADVERTISEMENT

ಹೆಚ್ಚುವರಿ ಪೊಲೀಸ್ ಅಧಿಕ್ಷಕ ಜಗದೀಶ್ ಮಾತನಾಡಿದರು. 

ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾದ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ, ಸದಸ್ಯರಾದ ಎಂವಿ.ವೇಮನ್ನ, ಇಮ್ತಿಯಾಜ್, ಅಗ್ನಿಶಾಮಕ ಧಳದ ಅಧಿಕಾರಿ ರಮೇಶ್, ಬೆಸ್ಕಾಂ ಇಲಾಖೆಯ ವೆಂಕಟೇಶ್, ಆಲೂ ಮಂಜುನಾಥ್, ಶ್ರೀನಿವಾಸ್, ಪ್ರಸನ್ನ ಭಾಗವಹಿಸಿದ್ದರು.

ಡಿ.ಜೆ ನಿರ್ಬಂಧಕ್ಕೆ ಆಕ್ಷೇಪ:

ತಾಲ್ಲೂಕಿನಲ್ಲಿ ನೂರಾರು ಸೌಂಡ್ ಸಿಸ್ಟಮ್ ಅಂಗಡಿಗಳಿದ್ದು 1900 ಕಾರ್ಮಿಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಗಣಪತಿ ಹಬ್ಬದಲ್ಲಿ ಡಿ.ಜೆ ಉಪಯೋಗಿಸಬಾರದು ಎಂದರೆ ಈ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ಸೌಂಡ್ ಸಿಸ್ಟಮ್ ಅಂಗಡಿಗಳ ಒಕ್ಕೂಟದ ಅಧ್ಯಕ್ಷ ನವರಂಗ್ ಮಂಜು ಹೇಳಿದರು.  ‘ಗಣೇಶ ಹಬ್ಬದ ವೇಳೆ ಸೌಂಡ್ ಸಿಸ್ಟಮ್ ಬಳಸುವಂತಿಲ್ಲ ಎಂಬ ನಿಯಮದಿಂದ ನಾವು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು. ಪಟ್ಟಣದಲ್ಲಿ ಗಣೇಶ ಹಬ್ಬ ಆಚರಣೆಗೆ ಅಲ್ಪ ಸಂಖ್ಯಾತರ ವಿರೋಧ ಇಲ್ಲ. ನಾವೇಲ್ಲರೂ ಅನ್ಯೋನ್ಯವಾಗಿದ್ದೇವೆ. ಆದರೆ ಪೊಲೀಸರು ಇಲ್ಲಸಲ್ಲದ ಕಾನೂನು ತರುತ್ತಿರುವುದು ಸರಿಯಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.