ಮಾಲೂರು: ಪಟ್ಟಣದ ರಸ್ತೆಯ ಬದಿಯ ಅಕ್ರಮ ಅಂಗಡಿ ತೆರವುಗೊಳಿಸುವ ಕಾರ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಆನಂದ ಎಚ್.ಆರ್ ಅಲಿಯಾಸ್ ಸಿದ್ಧಾರ್ಥ ಆನಂದ್ ಹಾಗೂ ಇತರರ ಮೇಲೆ ಮಾಲೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪುರಸಭೆಯ ಪೌರಕಾರ್ಮಿಕರು ದೂರು ನೀಡಿದ್ದಾರೆ. ಆ.6ರಂದು ಪಟ್ಟಣದ ಅರಳೇರಿ ರಸ್ತೆಯ ಇಕ್ಕೆಲಗಳಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಅಂಗಡಿ ತೆರವಿಗೆ ಪುರಸಭೆ ಮುಖ್ಯಾಧಿಕಾರಿ ನಿರ್ದೇಶನದಂತೆ ಪೌರಕಾರ್ಮಿಕರು ಮುಂದಾದಾಗ ಸಿದ್ಧಾರ್ಥ ಆನಂದ್ ಹಾಗೂ ಇತರರು ಬಂದು ಧಮ್ಕಿ ಹಾಕಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಕೆಲಸಕ್ಕೆ ಅಡ್ಡಿಪಡಿಸಿದರು. ಸರ್ಕಾರಿ ಕೆಲಸ ನಿರ್ವಹಿಸಲು ಹೆದರಿಕೆ ಆಗುತ್ತಿದ್ದು, ಪ್ರಾಣ ಬೆದರಿಕೆ ಇದೆ. ಸಿದ್ಧಾರ್ಥ ಆನಂದ್ ಹಾಗೂ ಇತರರ ಮೇಲೆ ಕ್ರಮ ವಹಿಸಬೇಕು ಎಂದು ಶಾಂತಮ್ಮ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)–2023 ಕಲಂ 132 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ), 352 (ಉದ್ದೇಶಪೂರ್ವಕ ಅವಮಾನ) ಹಾಗೂ 3(5)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುರಸಭಾ ಪೌರಕಾರ್ಮಿಕರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
ಮಾರಿಕಾಂಬ ದ್ವಾರದ ಬಳಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಹಾಗೂ ಪುರಸಭಾ ಮುಖ್ಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟೇಶ್, ಪೌರಕಾರ್ಮಿಕರಾದ ಶಾಂತಮ್ಮ, ಲಕ್ಷ್ಮಯ್ಯ ಮಾತನಾಡಿದರು. ಅರಳೇರಿ ರಸ್ತೆಯಲ್ಲಿ ಹಲವಾರು ಶಾಲಾ ಕಾಲೇಜುಗಳಿದ್ದು, ವಿದಾರ್ಥಿಗಳು ಶಾಲೆಗೆ ಹೋಗಲು ಈ ರಸ್ತೆ ಅವಲಂಬಿಸಿದ್ದಾರೆ. ಸಾರ್ವಜನಿಕ ಉದ್ಯಾನ ಸೇರಿದಂತೆ ಬಹುತೇಕ ಮನೆಗಳು ಈ ಭಾಗದಲ್ಲಿರುವುದರಿಂದ ಈ ರಸ್ತೆ ಜನದಟ್ಟಣೆಯಿಂದ ಕೂಡಿರುತ್ತದೆ. ಅಕ್ರಮವಾಗಿ ಅಂಗಡಿಗಳನ್ನು ತೆರೆದಿರುವುದರಿಂದ ವಾಹನ ಸವಾರರಿಗೂ ಮತ್ತು ಪಾದಚಾರಿಗಳಿಗೂ ತೊಂದರೆಯಾಗಿದೆ ಎಂದರು.
ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಬುಧವಾರ ಮಧ್ಯಾಹ್ನ ಪುರಸಭಾ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಅವರ ಆದೇಶದ ಮೇರೆಗೆ ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಿದ್ಧಾರ್ಥ ಆನಂದ್ ಹಾಗೂ ಆತನ ಸಹಚರರು ಏಕಾಏಕಿ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದಾರೆ. ಅದುದರಿಂದ ನಮಗೆ ಇದರಿಂದ ತುಂಬಾ ಅವಮಾನವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪುರಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಸದಸ್ಯರಾದ ಎನ್.ವಿ.ಮುರಳೀಧರ್, ಪದ್ಮಾವತಿ, ನಾಮಿನಿ ಸದಸ್ಯರಾದ ಎಂ.ಆರ್.ರಂಗಪ್ಪ, ಜೆ.ಎಂ.ಸುರೇಶ್ ಕುಮಾರ್, ಲಕ್ಷ್ಮಿ, ಪೌರಕಾರ್ಮಿಕರಾದ ವೆಂಕಟೇಶ್ ಶಾಂತಮ್ಮ, ಲಕ್ಷ್ಮಯ್ಯ, ಲಕ್ಷ್ಮಿನಾರಾಯಣ್ , ಸತ್ತಾರ್, ಕಿರಣ್, ಉಮೇಶ್, ಯುವರಾಜ್ , ಮಹೇಶ್ ವೆಂಕಟಸ್ವಾಮಿ , ಮಂಜಮ್ಮ ಗಿರಿಜಮ್ಮ, ಲಕ್ಷ್ಮಮ್ಮ, ತೊಳಿಸಮ್ಮ ಭಾಗ್ಯಮ್ಮ, ಲಕ್ಷ್ಮಿ, ಮಂಗಮ್ಮ , ಮಸ್ತಾನಮ್ಮ, ಪುಷ್ಪ, ಭಾಗ್ಯಲಕ್ಷ್ಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.