ADVERTISEMENT

ಮಾಲೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:15 IST
Last Updated 24 ಜನವರಿ 2025, 14:15 IST

ಪ್ರಜಾವಾಣಿ ವಾರ್ತೆ

ಮಾಲೂರು: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷ ಆಗಿ ಕಾಂಗ್ರೆಸ್ ಬೆಂಬಲಿತ ಬಾಳಿಗಾನಹಳ್ಳಿ ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ಆಗಿ ನೂಟವೆ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಮೂಲಕ ಮೂವತ್ತಾರು ವರ್ಷಗಳಿಂದ ಕಾಂಗ್ರೆಸ್‌ಯೇತರ ಪಕ್ಷಗಳ ಹಿಡಿತದಲ್ಲಿದ್ದ ಪಿಎಲ್‌ಡಿ ಬ್ಯಾಂಕ್ ಆಡಳಿತದ ಚುಕ್ಕಾಣಿಯು ಮತ್ತೆ ಕಾಂಗ್ರೆಸ್ ಪಾಲಾಗಿದೆ. 

ADVERTISEMENT

ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಚುನಾವಣೆಗಾಗಿ ಅಧ್ಯಕ್ಷ ಸ್ಥಾನಕ್ಕೆ ಸಾಲಗಾರರಲ್ಲದ ಕ್ಷೇತ್ರದ ಬಾಳಿಗಾನಹಳ್ಳಿ ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೂಟವೆ ವೆಂಕಟೇಶ್ ಅವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಈ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೀಣಾ ಘೋಷಣೆ ಮಾಡಿದರು. 

ಪಿಎಲ್‌ಡಿ ಬ್ಯಾಂಕ್ 14 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುಣಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ 10 ಅಭ್ಯರ್ಥಿಗಳು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ 4 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. 

ಶಾಸಕ ಕೆವೈ.ನಂಜೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಬ್ಯಾಂಕ್ ಅಭಿವೃದ್ಧಿ ಸಾಧ್ಯ.
ರೈತರಿಗೆ ಹೆಚ್ಚಿನ ಸಾಲ ನೀಡಿ ಬ್ಯಾಂಕನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲಾಗುವುದು. ಈ ಗೆಲುವು ಕಾಂಗ್ರೆಸ್ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಸಹಕಾರ ಸಚಿವರ ಸಹಕಾರ ಪಡೆದು, ರೈತರ ಅಭಿವೃದ್ಧಿಗೆ ಅನುದಾನ ತರಲಾಗುವುದು ಎಂದರು. 

ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷ ಬಾಳಿಗಾನಹಳ್ಳಿ ಶ್ರೀನಿವಾಸ್ ಮಾತನಾಡಿ, ಪಿಎಲ್‌ಡಿ ಬ್ಯಾಂಕ್ ಆಡಳಿತವು ಮೂವತ್ತಾರು ವರ್ಷಗಳಿಂದ ಜೆಡಿಎಸ್–ಬಿಜೆಪಿ ಬೆಂಬಲಿತ ನಿರ್ದೇಶಕರ ಆಡಳಿತದಲ್ಲಿತ್ತು. ಇದೀಗ ಕಾಂಗ್ರೆಸ್ ಪಾಲಾಗಿದೆ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಮದುಸೂದನ್, ವಿಜಯನಾರಸಿಂಹ, ಅಹಮದ್ ನಯುಂ ಹುಲ್ ಖಾನ್, ರಾಜಪ್ಪ, ಆಂಜಿನಪ್ಪ, ಅಶ್ವಥರೆಡ್ಡಿ, ರಮೇಶ್ ಗೌಡ, ಕ್ಷೇತ್ರನಳ್ಳಿ ವೆಂಕಟೇಶ್, ಎಟ್ಟಿಕೊಡಿ ವೀರ ಭದ್ರಪ್ಪ, ಜಿ.ವಿ.ಮಂಜುನಾಥ್, ಸಂಪಗೆರೆ ಮುನಿರಾಜು, ಚಿಕ್ಕತಿರುಪತಿ ನಾಗೇಶ್, ಶಬ್ಬೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.