(ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಕೋಲಾರ: ಕುರಿ ಮೇಯಿಸಲು ರಸ್ತೆ ಬದಿ ತೆರಳುತ್ತಿದ್ದ ವ್ಯಕ್ತಿಯು ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ತಾಲೂಕಿನ ಪಟ್ನ ಗ್ರಾಮದ ಬಳಿ ಜರುಗಿದೆ. ಕುಟುಂಬಸ್ಥರು ಗ್ರಾಮಸ್ಥರು ಆಕ್ರೋಶಗೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪಟ್ನ ಗ್ರಾಮದ ನಾಗಪ್ಪ (60) ಮೃತ ವ್ಯಕ್ತಿ. ತಾಲ್ಲೂಕಿನ ಪಟ್ನ ಗ್ರಾಮದ ಬಳಿ ಬೇತಮಂಗಲ ಮುಖ್ಯ ರಸ್ತೆ ಬದಿ ಎಂದಿನಂತೆ ಕುರಿಗಳನ್ನು ಮೇಯಿಸಲು ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಚಾಲಕ ಕಾರನ್ನು ನಿಲ್ಲಿಸಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರಗೆ ದಾಖಲಿಸುವ ಕೆಲಸ ಮಾಡಿದ್ದರೆ ಬದುಕುಳಿಯುತ್ತಿದ್ದ. ಆದರೆ ಮಾನವೀಯತೆ ತೋರದೆ ಅಪಘಾತವೆಸಗಿ ಕಾರಿನ ಸಮೇತ ಪರಾರಿಯಾಗಿರುವುದು ಗ್ರಾಮಸ್ಥರು ಹಾಗೂ ಮೃತ ನಾಗಪ್ಪ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಮೃತ ದೇಹವನ್ನು ಕೋಲಾರ ಬೇತಮಂಗಲ ಮುಖ್ಯ ರಸ್ತೆಯಲ್ಲಿ ಇರಿಸಿ ರಸ್ತೆ ತಡೆ, ಪ್ರತಿಭಟನೆ ಮಾಡಿದರು.
ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಪೊಲೀಸರು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸುಖಾಂತ್ಯಗೊಂಡಿತು. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.