ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಹಂಗಾಮು ಶುರುವಾಗಿದ್ದು, ಆರಂಭದಲ್ಲೇ ಧಾರಣೆ ಕುಸಿದಿರುವುದಕ್ಕೆ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಇಂದಿರಾ ಭವನ್ ವೃತ್ತದಲ್ಲಿ ಸೋಮವಾರ ಬೆಳೆಗಾರರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಮಾವಿನ ಧಾರಣೆ ಏರಿಕೆಯಾಗದ ಸಂಬಂಧ ಬೇಸರ ವ್ಯಕ್ತಪಡಿಸಿದ ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ‘ಈ ಭಾಗದಲ್ಲಿ ನದಿಗಳಾಗಲಿ, ಯಾವುದೇ ಶಾಶ್ವತ ನೀರಾವರಿ ಯೋಜನೆಯಾಗಲಿ ಇಲ್ಲ. ಮಾವಿನ ಬೆಳೆ ನಂಬಿಕೊಂಡು ಈ ಭಾಗದ ಜನ ಇದ್ದಾರೆ. ಆದರೆ, ಸರಿಯಾಗಿ ಮಾವಿನ ಫಸಲು ಇಲ್ಲದೆ, ಈಗ ದರವಿಲ್ಲದೆ ರೈತರು ಕಂಗಾಲಾಗಿದ್ದಾರೆ’ ಎಂದರು.
‘ಒಂದು ಟನ್ ಮಾವು ₹ 3 ಸಾವಿರ, ₹ 4 ಸಾವಿರಕ್ಕೆ ಬಿಕರಿ ಆಗುತ್ತಿದೆ. ಸದ್ಯ ರೈತರು ಮಾವಿನ ತೋಟಗಳಲ್ಲಿ ಫಸಲು ಕೀಳಲು ಹಿಂಜರಿಯುತ್ತಿದ್ದಾರೆ. ಈಗ ಬರುತ್ತಿರುವ ಆದಾಯವು ಮಾವು ಕೀಳುವ ಕೂಲಿ ಕಾರ್ಮಿಕರಿಗೆ ಹಾಗೂ ಟ್ರ್ಯಾಕ್ಟರ್ ಬಾಡಿಗೆಗೂ ಕೊಡಲು ಸಾಕಾಗುತ್ತಿಲ್ಲ. ವರ್ಷ ಪೂರ್ತಿ ಮಾವು ಬೆಳೆ ಬರುತ್ತದೆ ಎಂದು ರೈತರು ಹಲವು ಕನಸು ಕಾಣುತ್ತಾರೆ. ಆದರೆ, ಮಾವಿಗೆ ಬೆಲೆ ಸಿಗುತ್ತಿಲ್ಲ . ಇದರಿಂದ ರೈತರು ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಮಾವಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾಲೋಚನೆ ನಡೆಸಿ ನಿರಂತರವಾಗಿ ಮಾವಿನ ಬೆಳೆಗೆ ಕನಿಷ್ಠ 15 ಸಾವಿರ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಬೇಡಿಕೆಗಾಗಿ ಆಗ್ರಹಿಸಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ನೂರಾರು ರೈತರು ಸೇರಿದ್ದರೂ ತಾಲ್ಲೂಕು ದಂಡಾಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ಬರಲಿಲ್ಲ. ಉಸ್ತುವಾರಿ ಮಂತ್ರಿಯೂ ಬರಲಿಲ್ಲ. ಪೊಲೀಸ್ ಇಲಾಖೆಯವರು ಬಂದು ಜಾಗ ತೆರವುಗೊಳಿಸಲು ಧಮ್ಕಿ ಹಾಕುತ್ತಿದ್ದಾರೆ. ಬೇರೆ ಯಾವುದೇ ಅಧಿಕಾರಿಗಳು ನಮ್ಮ ಕಷ್ಟವನ್ನು ಆಲಿಸಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿರಸ್ತೇದಾರ ಗೌತಮ್ ಪ್ರತಿಭಟನಾ ಸ್ಥಳಕ್ಕೆ ಬಳಿ ಬಂದ ಬೇಡಿಕೆಗಳ ವಿಚಾರಿಸಿ, ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ರೈತರ ಸಭೆ ಕರೆದು ಸಮಸ್ಯೆ ಅಲಿಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್‍ಕುಮಾರ್, ಜಿಲ್ಲಾ ಖಾಜಾಂಚಿ ಸೈಯದ್ ಫಾರುಕ್, ಉಪಾಧ್ಯಕ್ಷ ಬೈರೆಡ್ಡಿ, ಜಂಟಿ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಈರಪ್ಪರೆಡ್ಡಿ, ಪೋಷಕ ಸದಸ್ಯರಾದ ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ, ಪಿ.ಆರ್.ಸೂರ್ಯನಾರಾಯಣ, ಮುಖಂಡರಾದ ಹೆಬ್ಬಟ ರಮೇಶ್, ಶಿವರಾಜಕುಮಾರ್ ಇದ್ದರು.
ರೈತರು ವ್ಯಾಪಾರಸ್ಥರ ಗೋಳಾಟ
ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಮತ್ತು ಖರೀದಿದಾರರ ಕೊರತೆ ಕಾರಣ ರೈತರು ವ್ಯಾಪಾರಸ್ಥರು ಹಾಗೂ ಮಂಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋತಾಪುರಿ ಬಾದಾಮಿ ರಾಜಗಿರ ಮಾಲಿಕಾ ಬೇನಿಶಾಹ್ ಸೇರಿದಂತೆ ವಿವಿಧ ಮಾವು ತಳಿಗಳಿಗೆ ಈ ಬಾರಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಜ್ಯೂಸ್ ತಯಾರಿಕೆಗೆ ಹೆಚ್ಚು ಬೆಳೆಸುವ ತೋತಾಪುರಿ ಮಾವು ಖರೀದಿದಾರರ ಕೊರತೆಯಿಂದ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಲಾಲ್ ಬಾಗ್ ಜ್ಯೂಸ್ ಫ್ಯಾಕ್ಟರಿಯಿಂದ ಟನ್‌ಗೆ ಕೇವಲ ₹6 ಸಾವಿರಕ್ಕೆ ಖರೀದಿಸುತ್ತಿರುವುದರಿಂದ ರೈತರಿಗೆ ತೊಂದರೆ ಎದುರಾಗಿದೆ. ಬಾದಾಮಿ ಮತ್ತು ಬೇನಿಶಾಹ್ ಮಾವುಗಳು ₹15000 ರಿಂದ ₹20000 ರ ನಡುವೆ ಮಾರಾಟವಾಗುತ್ತಿದ್ದರೂ ಹೆಚ್ಚಿನ ಲಾಭ ಕಂಡುಬಂದಿಲ್ಲ. ಕರಾವಳಿ ಮತ್ತು ಇತರ ರಾಜ್ಯಗಳಲ್ಲಿ ಮಳೆಯಿಂದಾಗಿ ಖರೀದಿದಾರರು ತಾತ್ಕಾಲಿಕವಾಗಿ ಶ್ರೀನಿವಾಸಪುರದ ಮಾವು ಖರೀದಿಗೆ ತೊಡಗಿಸಿಕೊಳ್ಳುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.