ADVERTISEMENT

ಮಾವಿಗೆ ಪರಿಹಾರ ಘೋಷಿಸಿ: ಮನವಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 13:19 IST
Last Updated 25 ಮೇ 2021, 13:19 IST

ಕೋಲಾರ: ಸರ್ಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮಾವು ಬೆಳಗಾರರ ನೆರವಿಗೆ ಧಾವಿಸಬೇಕು. ಪ್ರತಿ ಹೆಕ್ಟೇರ್ ಮಾವಿಗೆ ₹ 50 ಸಾವಿರ ಪರಿಹಾರ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮುಖ್ಯಮಂತ್ರಿಗೆ ಹಾಗೂ ತೋಟಗಾರಿಕಾ ಸಚಿವರಿಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ತೋಟಗಾರಿಕಾ ಸಚಿವ ಆರ್.ಶಂಕರ್ ಅವರಿಗೆ ಪತ್ರ ಬರೆದಿರುವ ನಾರಾಯಣಸ್ವಾಮಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯು ಮಾವು ಬೆಳೆಗೆ ಪ್ರಸಿದ್ಧಿಯಾಗಿವೆ ಎಂದು ತಿಳಿಸಿದ್ದಾರೆ.

ಜಗತ್ತಿಗೆ ಗುಣಮಟ್ಟದ ಮಾವಿನ ಹಣ್ಣು ನೀಡುವ ಈ ಜಿಲ್ಲೆಗಳ ರೈತರು ಇದೀಗ ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಕೊಯ್ಲಿಗೆ ಬಂದಿರುವ ಮಾವಿಗೆ ಮಾರುಕಟ್ಟೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸಕಾಲಕ್ಕೆ ಮಾವು ಕೊಯ್ಲು ಮಾಡದಿದ್ದರೆ ತೋಟಗಳಲ್ಲೇ ಹಾಳಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಒಂದು ಹೆಕ್ಟೇರ್ ಮಾವು ಬೆಳೆಗೆ ಉಳುಮೆ, ಗೊಬ್ಬರ, ಕಳೆ ತೆಗೆಯುವಿಕೆ, ಕೀಟನಾಶಕ ಸಿಂಪಡಣೆ, ಕಟಾವು ಸೇರಿದಂತೆ ಸುಮಾರು ₹ 40 ಸಾವಿರ ಖರ್ಚು ಬರುತ್ತದೆ. ಕಳೆದ 15 ವರ್ಷಗಳಲ್ಲಿ ಒಂದೆರಡು ವರ್ಷ ಹೊರತುಪಡಿಸಿ ಆಲಿಕಲ್ಲು, ಬಿಸಿಲ ತಾಪ, ಅಕಾಲಿಕ ಮಳೆಯ ಕಾರಣದಿಂದ ಮಾವಿಗೆ ಉತ್ತಮ ಬೆಲೆ ಸಿಗದೆ ರೈತರು ಸತತ ನಷ್ಟ ಅನುಭವಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬದುಕು ಅತಂತ್ರ: ಪ್ರತಿ ವರ್ಷ ನಷ್ಟದಿಂದ ಬೇಸತ್ತಿರುವ ರೈತರು ಮಾವಿನ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಈ ಬಾರಿಯೂ ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಮಾವಿಗೆ ಮಾರುಕಟ್ಟೆ, ಬೆಲೆ ಸಿಗದೆ ರೈತರ ಬದುಕು ಅತಂತ್ರವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ಪರಿಹಾರದಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್‌ನಿಂದ ಮಾವು ವಹಿವಾಟಿಗೆ ಕಷ್ಟವಾಗಿದೆ. ಮಧ್ಯವರ್ತಿಗಳ ಕಾಟ, ಸಾಗಣೆ, ಬೆಲೆ ನಿಗದಿಯಲ್ಲಿ ಅನ್ಯಾಯದಿಂದ ರೈತರು ಬರಿಗೈಯಲ್ಲಿ ವಾಪಸ್‌ ಹೋಗಬೇಕಾಗಿದೆ. ಸಂಕಷ್ಟದಲ್ಲೂ ಧೃತಿಗೆಡದೆ ಆತ್ಮಸ್ಥೈರ್ಯದಿಂದಿರುವ ರೈತರಿಗೆ ಸರ್ಕಾರ ನೆರವಾಗಬೇಕು. ಮಾವಿಗೆ ಪರಿಹಾರ ಘೋಷಿಸುವ ಮೂಲಕ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.