ADVERTISEMENT

ದುರ್ವಾಸನೆ, ಕೊಚ್ಚೆ ನಡುವೆ ಸಂತೆ

ಮಾಲೂರು: ಮೂಲಸೌಕರ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 5:16 IST
Last Updated 10 ಡಿಸೆಂಬರ್ 2020, 5:16 IST
ಮಾಲೂರು ಪಟ್ಟಣದ ಹನುಮಂತ ನಗರದಲ್ಲಿರುವ ಸಂತೆ ಮೈದಾನದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಂತಿರುವುದು
ಮಾಲೂರು ಪಟ್ಟಣದ ಹನುಮಂತ ನಗರದಲ್ಲಿರುವ ಸಂತೆ ಮೈದಾನದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಂತಿರುವುದು   

ಮಾಲೂರು: ಪಟ್ಟಣದಲ್ಲಿ ಪ್ರತಿ ದಿನ ಮುಂಜಾನೆ ನಡೆಯುವ ತರಕಾರಿ ಸಂತೆ ಮೈದಾನದಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದ್ದು, ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.

ಹನುಮಂತ ನಗರದಲ್ಲಿರುವ ಪುರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು ಎರಡು ಎಕರೆ ಖಾಲಿ ಪ್ರದೇಶದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಮುಂಜಾನೆ 4 ಗಂಟೆಗೆ ರೈತರು ತಾವು ಬೆಳೆದ ತರಕಾರಿ ಮತ್ತು ವಿವಿಧ ಸೊಪ್ಪುಗಳನ್ನು ತಂದು ವ್ಯಾಪಾರ ವಹಿವಾಟು ನಡೆಸುತ್ತಾರೆ. ತಾಜ ತರಕಾರಿ ಖರೀದಿಸಲು ನಾಗರಿಕರು ಮುಗಿಬೀಳುವುದು ಸಹಜ ಸಂಗತಿ.

ಮಾಲೂರು -ಕೋಲಾರ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಸಂತೆ ಮೈದಾನ ಮುಖ್ಯರಸ್ತೆ ಹಾಗೂ ಆಜುಬಾಜಿನ ರಸ್ತೆಗಳಿಗೆ ಹೋಲಿಸಿದರೆ ಈ ಪ್ರದೇಶ ತಗ್ಗಿನಲ್ಲಿದೆ. ಸಂತೆ ಸುತ್ತ ಮುತ್ತಲು ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದ ಸಮಯದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ. ಈ ನೀರಿನಲ್ಲಿ ಉಳಿದ ತರಕಾರಿಗಳು ಬೆರೆತು ಕ್ರಮೇಣ ಕೊಳೆತು ದುರ್ವಾಸನೆ ಬೀರಿ, ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಸಂತೆಗೆ ಬರುವ ಗ್ರಾಹಕರು ಪಾಡು ಹೇಳತೀರದಾಗಿದೆ. ಕೊಚ್ಚೆಯಲ್ಲೇ ನಡೆದು ತಮಗೆ ಅಗತ್ಯವಿರುವ ತರಕಾರಿ ಖರೀದಿಸಬೇಕಾಗಿದೆ.

ADVERTISEMENT

ಪುರಸಭೆ ಆಡಳಿತ ನಿರ್ಲಕ್ಷ್ಯ: ವರ್ಷಕ್ಕೊಮ್ಮೆ ಸಂತೆ ಸುಂಕ ಹರಾಜು ಮಾಡಲಾಗುತ್ತದೆ. ಬಿಡ್‌ ಪಡೆದವರು ಪ್ರತಿದಿನ ಸಂತೆಗೆ ಬರುವ ರೈತರಿಂದ ಇಂತಿಷ್ಟು ಎಂದು ವಸೂಲಿ ಮಾಡುತ್ತಾರೆ. ಆದರೆ ಯಾವುದೇ ರೀತಿ ಸೌಲಭ್ಯ ಒದಗಿಸಿಲ್ಲ ಎಂಬುವುದು ರೈತ ಬಾಬು ಆರೋಪಿಸಿದರು.

‘ಮಳೆ ಬಂದರೆ ಸಂತೆ ಮೈದಾನದಲ್ಲಿರುವ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡು, ರಸ್ತೆಗಳು ಕೊಚ್ಚೆಯಾಗುತ್ತವೆ. ತರಕಾರಿ ಖರೀದಿಸಲು ಹೆಚ್ಚಾಗಿ ಬರುವ ಮಹಿಳೆಯರು ಕೊಚ್ಚೆಯಲ್ಲಿ ಬಿದ್ದು ಎದ್ದು ಬರಬೇಕು. ಅಲ್ಲದೆ ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯ ಇಲ್ಲದೆ ಬಹಳ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಈ ಕೂಡಲೇ ಗಮನವಹಿಸಿ ಸ್ವಚ್ಛತೆ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ತರಕಾರಿ ವ್ಯಾಪಾರಿ ಮಂಜುನಾಥ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.