ಮಾಲೂರು: ಮೂಲ ಸೌಕರ್ಯ ಕೊರತೆ ಮತ್ತು ಕಳಪೆ ನಿರ್ಮಾಣ ಕಾರ್ಯದಿಂದಾಗಿ ನಗರದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅಸಮರ್ಥವಾಗಿದೆ. ಸುಮಾರು 25 ವರ್ಷಗಳಿಂದ ಸಾರ್ವಜನಿಕರು ಮತ್ತು ಕಲಾವಿದರ ಬೇಡಿಕೆ ಇದುವರೆಗೂ ಈಡೇರಿಸಲು ಸಾಧ್ಯವಾಗಿಲ್ಲ.
ವಾಹನಗಳ ತಂಗುದಾಣವಾಗಿ ಮಾರ್ಪಾಟು: ನಗರಸಭೆ ಆವರಣದಲ್ಲಿ ನಿರ್ಮಿತವಾದ ಈ ರಂಗಮಂದಿರ ಸರಿಯಾದ ಅಭಿವೃದ್ಧಿ ಕಾಣದೆ ಪ್ರಸ್ತುತ ವಾಹನಗಳ ತಂಗುದಾಣವಾಗಿ ಬಳಸಲ್ಪಡುತ್ತಿದೆ. ಇದರಿಂದಾಗಿ ಕನ್ನಡ ರಾಜ್ಯೋತ್ಸವ ಸೇರಿದಂತೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸುಮಾರು 25 ವರ್ಷಗಳಿಂದ ರಸ್ತೆಗಳಲ್ಲಿ ಪೆಂಡಾಲ್ ಹಾಕಿ ನಡೆಸಲಾಗುತ್ತಿದೆ. ನಗರಸಭೆಯ 80/150 ಅಡಿ ಜಾಗದಲ್ಲಿ ನಿರ್ಮಿಸಲಾದ ಈ ರಂಗಮಂದಿರಕ್ಕೆ ಸರಿಯಾದ ಅಭಿವೃದ್ಧಿ ಕಾಣದೆ ರಂಗಮಂದಿರದ ಪಾವಿತ್ರ್ಯತೆಗೆ ಧಕ್ಕೆ ಎದುರಾಗಿದೆ.
ತಮಿಳುನಾಡು ಗಡಿ ಭಾಗವಾಗಿರುವ ಮಾಲೂರು ನಗರದಲ್ಲಿ 50 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮ ನಡೆಸಲು ರಂಗಮಂದಿರ ಸೌಕರ್ಯ ಇಲ್ಲದೆ ನಗರದ ಮುಖ್ಯ ರಸ್ತೆಯಲ್ಲಿ ಪ್ರತಿವರ್ಷ ₹3-4 ಲಕ್ಷ ಖರ್ಚು ಮಾಡಿ ಪೆಂಡಾಲ್ ಹಾಕಬೇಕಾಗುತ್ತಿದೆ. ಇದು ಆಯೋಜಕರಿಗೆ ದೊಡ್ಡ ಆರ್ಥಿಕ ಭಾರವಾಗಿ ಪರಿಣಮಿಸಿದೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅವರಂತೆ ಪ್ರಮುಖ ಕಲಾವಿದರನ್ನು ಆಹ್ವಾನಿಸಿ ಐತಿಹಾಸಿಕ ರಾಜ್ಯೋತ್ಸವ ಕಾರ್ಯಕ್ರಮ ಮಾಡಲಾಗುತ್ತಿತ್ತು. ಆದರೆ, ಇಂದು ರಸ್ತೆಬದಿ ಪೆಂಡಾಲ್ ನಡೆಸಬೇಕಾದ ಪರಿಸ್ಥಿತಿ ಇದೆ.
ರಂಗಮಂದಿರದ ಐತಿಹಾಸಿಕ ಹಿನ್ನೆಲೆ: ಪಟ್ಟಣದ ಪಾಪ್ ಸಿಂಗ್, ಟಿ.ವೆಂಕಟಪ್ಪ, ಮಾಲೂರು ಸೊಣ್ಣಪ್ಪ ಮುಂತಾದ ಮಹಾನುಭಾವರು ಆರಂಭಿಸಿದ ಸಾಂಸ್ಕೃತಿಕ ಪರಂಪರೆಗೆ ನಾಂದಿಯಾದ ಈ ರಂಗಮಂದಿರ ಅಂದಿನ ಪುರಸಭಾಧ್ಯಕ್ಷ ವೆಂಕಟಸ್ವಾಮಿ ಅವರಿಂದ ಜಾಗ ಮಂಜೂರಾಗಿ ನಿರ್ಮಾಣವಾಗಿತ್ತು. 2014ರಲ್ಲಿ ಶಾಸಕ ಕೆ.ಎಸ್.ಮಂಜುನಾಥಗೌಡ ನೇತೃತ್ವದಲ್ಲಿ ಸುಮಾರು ₹1.10 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಕಾರ್ಯ ಆರಂಭವಾಗಿ ಕೋಲಾರದ ಟಿ.ಚನ್ನಯ್ಯ ರಂಗಮಂದಿರ ಮಾದರಿಯಲ್ಲಿ ನಿರ್ಮಾಣದ ಯೋಜನೆ ಇತ್ತು. ಆದರೆ, ಚುನಾವಣೆ ನಂತರ ಕಾರ್ಯ ಸ್ಥಗಿತಗೊಂಡಿತು. ನಂತರ ಸಿ.ಪಿ.ನಾಗರಾಜ್ ಪುರಸಭೆ ಅಧ್ಯಕ್ಷತೆಯಲ್ಲಿ ಅಗತ್ಯ ಸೌಲಭ್ಯ ಪೂರ್ಣಗೊಳ್ಳದೆ ಹೆಸರಿಗೆ ಮಾತ್ರ ರಂಗಮಂದಿರ ಉದ್ಘಾಟಿಸಲಾಯಿತು.
ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ವಿ.ಹನಮಂತಪ್ಪ ಪ್ರತಿಕ್ರಿಯಿಸಿ, ಶಾಸಕ ಕೆ.ವೈ.ನಂಜೇಗೌಡ ₹2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಥಿಯೇಟರ್ ಕಾಮಗಾರಿ ಸಿದ್ಧಗೊಳಿಸಲು ಮುಂದಾಗಿರುವುದು ತೃಪ್ತಿದಾಯಕ ಎಂದು ಹೇಳಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ರಾಜ್ಯೋತ್ಸವದಂತಹ ಕಾರ್ಯಕ್ರಮ ನಡೆಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪೆಂಡಾಲ್ ಹಾಕಬೇಕಾಗುತ್ತಿದೆ. ಕೂಡಲೇ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗ ಮಂದಿರದ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
₹2ಕೋಟಿ ಅನುದಾನ ಭರವಸೆ
ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ಸರ್ಕಾರದಿಂದ ₹2ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸುಸಜ್ಜಿತ ಥಿಯೇಟರ್ ಕಾಮಗಾರಿ ಕೂಡಲೇ ಆರಂಭಿಸಲಾಗುವುದು ಎಂದು ತಿಳಿಸಿದರು. ನಗರದ ಸಾಂಸ್ಕೃತಿಕ ಜೀವನಕ್ಕೆ ಅತ್ಯಗತ್ಯವಾದ ಈ ರಂಗಮಂದಿರ ದೀರ್ಘಕಾಲದ ಸಾರ್ವಜನಿಕ ಬೇಡಿಕೆಯ ಕೇಂದ್ರ ಬಿಂದುವಾಗಿದೆ. ಹೊಸ ಅನುದಾನ ಮತ್ತು ಭರವಸೆಯ ನಡುವೆ ನಗರವಾಸಿಗಳು ಮತ್ತು ಕಲಾಪ್ರೇಮಿಗಳು 25 ವರ್ಷಗಳ ಕನಸು ನನಸಾಗುವುದನ್ನು ಎದುರು ನೋಡುತ್ತಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.