ADVERTISEMENT

‘ಋತುಚಕ್ರ; ಮೌಢ್ಯ ಬೇಡ’

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ, ನೈರ್ಮಲ್ಯ ಜಾಗೃತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 5:21 IST
Last Updated 2 ಜೂನ್ 2022, 5:21 IST
ಕೋಲಾರದಲ್ಲಿ ನಡೆದ ಋತುಚಕ್ರ ನೈರ್ಮಲ್ಯ ಜಾಗೃತಿ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಅತಿಥಿಗಳು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು
ಕೋಲಾರದಲ್ಲಿ ನಡೆದ ಋತುಚಕ್ರ ನೈರ್ಮಲ್ಯ ಜಾಗೃತಿ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಅತಿಥಿಗಳು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು   

ಕೋಲಾರ: ‘ಋತುಚಕ್ರದ ಬಗ್ಗೆ ನಂಬಿಕೆ ಇರಬೇಕೇ ಹೊರತು ಮೂಢನಂಬಿಕೆ ಇರಬಾರದು. ಹಾಗೇನಾದರೂ ಇದ್ದರೆ ಮೌಢ್ಯಗಳಿಂದ ಹೊರಬನ್ನಿ’ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸಿ. ಗೀತಾ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಕಚೇರಿ ಆಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಋತುಚಕ್ರ ನೈರ್ಮಲ್ಯ ಜಾಗೃತಿ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರಿಗೆ ಋತುಚಕ್ರ ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದ ಅವರು, ‘ಋತುಚಕ್ರವು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಹೆಣ್ಣು ಮಕ್ಕಳು ಮುಜುಗರಕ್ಕೆ ಒಳಗಾಗದೆ ಋತುಚಕ್ರ ವೇಳೆಯಲ್ಲಿ ಶುಚಿತ್ವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

ADVERTISEMENT

‘ಋತುಚಕ್ರದ ವೇಳೆ ಹೆಣ್ಣುಮಕ್ಕಳು ಶುದ್ಧ ನೀರನ್ನು ಬಳಸಿ ಶುಚಿತ್ವ ಕಾಪಾಡಿಕೊಳ್ಳಬೇಕು. ಸಂಬಂಧಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಆರ್‌ಸಿಎಚ್‌ ಅಧಿಕಾರಿ ಡಾ.ವಿಜಯ್ ಕುಮಾರಿ, ಋತುಚಕ್ರದ ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಮಾತನಾಡಿದರು.

ಋತುಚಕ್ರದ ವೇಳೆಯಲ್ಲಿ ಪೌಷ್ಟಿಕ ಆಹಾರಕ್ಕೆ ಮಹತ್ವ ನೀಡುವಂತೆ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಕಂಡುಬಂದಲ್ಲಿ ತಜ್ಞರನ್ನು ಕಾಣಬೇಕು ಎಂದು ಸಲಹೆ ನೀಡಿದರು.ಋತುಚಕ್ರ ನೈರ್ಮಲ್ಯ ಮಾಹಿತಿಯನ್ನು ಒಳಗೊಂಡ ಭಿತ್ತಿಪತ್ರಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ಎಸ್. ಸುನಂದಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕುಷ್ಠರೋಗ ನಿವಾರಣಾ ಅಧಿಕಾರಿಗಳ ಕಚೇರಿ ಸಿಬ್ಬಂದಿ ವೇಣು,ಜಿಲ್ಲಾ ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಸುಮನ್ ಕುಮಾರ್, ಶಾಲಾ ಶಿಕ್ಷಕರಾದ ಎಸ್‌.ಎಂ. ನಾರಾಯಣಸ್ವಾಮಿ, ಲೋಕೇಶ್‌, ಸಂತೋಷ್‌ ಕುಮಾರಿ, ಪ್ರಮೀಳಾ, ಭಾಗ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.