
ಕೋಲಾರ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸಲು ಎಂಇಎಸ್‍ನವರಿಗೆ ಏನು ಯೋಗ್ಯತೆ ಇದೆ? ಅವರಿಗೂ ಕರ್ನಾಟಕಕ್ಕೆ ಏನು ಸಂಬಂಧ? ಅವರು ರಾಜ್ಯದಲ್ಲಿ ಇರುವುದನ್ನು ವಿರೋಧಿಸಿ ನಾವು ಕರಾಳ ದಿನ ಆಚರಣೆ ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಂಇಎಸ್‌ನವರು ಇಲ್ಲಿನ ನೆಲ, ಜಲವನ್ನು ಉಪಯೋಗಿಸಿಕೊಂಡು ಕನ್ನಡಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ’ ಎಂದರು.
ಆರ್‌ಎಸ್‍ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿಲುವಿನ ಕುರಿತು ಪ್ರತಿಕ್ರಿಯಿಸಿ, ‘ಮಲ್ಲಿಕಾರ್ಜುನ ಖರ್ಗೆ ಪಕ್ಷದ ಹಿರಿಯರು, ಎಐಸಿಸಿ ಅಧ್ಯಕ್ಷರು. ನಾವು ಅವರ ತೀರ್ಮಾನಕ್ಕೆ ಬದ್ಧ’ ಎಂದು ಹೇಳಿದರು.
ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಕಾಲ ಬದಲಾಗುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಲು ಮುಂದಾಗಿದ್ದಾರೆ. ಯಾವುದೇ ಶಾಲೆಯನ್ನು ಮುಚ್ಚಬೇಕು ಎಂಬುದು ಸರ್ಕಾರದ ಉದ್ದೇಶವಿಲ್ಲ. ಕನ್ನಡ ಶಾಲೆಯಲ್ಲಿ ಓದಿದವರು ಸಹ ಐಎಎಸ್, ಎಂಜಿನಿಯರ್, ವೈದ್ಯರು, ವಿಜ್ಞಾನಿಗಳು ಆಗಿದ್ದಾರೆ. ಕನ್ನಡ ಶಾಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಅನುದಾನ, ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರ ಸಿದ್ಧವಿದೆ. ಈ ನಿಟ್ಟಿನಲ್ಲಿ ನಾನು ಕೂಡ ಪ್ರಯತ್ನ ಹಾಕುತ್ತೇನೆ’ ಎಂದರು.