ADVERTISEMENT

ಹಾಲು ಖರೀದಿ ದರ ಹೆಚ್ಚಳ: ಹೈನೋದ್ಯಮಕ್ಕೆ ಬಲ

ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

ಜೆ.ಆರ್.ಗಿರೀಶ್
Published 13 ಮಾರ್ಚ್ 2019, 19:46 IST
Last Updated 13 ಮಾರ್ಚ್ 2019, 19:46 IST
ಕೋಲಾರದ ಕೋಚಿಮುಲ್‌ ಘಟಕದಲ್ಲಿ ಕಾರ್ಮಿಕರು ಹಾಲಿನ ಪ್ಯಾಕೆಟ್‌ ಜೋಡಿಸುತ್ತಿರುವುದು.
ಕೋಲಾರದ ಕೋಚಿಮುಲ್‌ ಘಟಕದಲ್ಲಿ ಕಾರ್ಮಿಕರು ಹಾಲಿನ ಪ್ಯಾಕೆಟ್‌ ಜೋಡಿಸುತ್ತಿರುವುದು.   

ಕೋಲಾರ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಸಿಹಿ ಸುದ್ದಿ ನೀಡಿದ್ದು, ಹಾಲು ಖರೀದಿ ದರವನ್ನು ಲೀಟರ್‌ಗೆ ₹ 1 ಹೆಚ್ಚಿಸಿದೆ.

ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,866 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ದಿನನಿತ್ಯ 9.31 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ.

ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 1.50 ಲಕ್ಷ ಲೀಟರ್‌, ಎಂಟಿಆರ್‌ ಕಂಪೆನಿಗೆ 10 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3.20 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 2.93 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 40 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 20 ಸಾವಿರ ಲೀಟರ್‌ ಫ್ಲೆಕ್ಸಿ ಫ್ಯಾಕ್‌ಗೆ, 25 ಸಾವಿರ ಲೀಟರ್‌ ಹಾಲು ಚೀಸ್‌ ಉತ್ಪಾದನೆಗೆ ಬಳಕೆಯಾಗುತ್ತಿದೆ.

ADVERTISEMENT

ಅಲ್ಲದೇ, ಕ್ಷೀರ ಭಾಗ್ಯ ಯೋಜನೆಗೆ ಅಗತ್ಯವಿರುವ ಹಾಲಿನ ಪುಡಿ ತಯಾರಿಕೆಗೆ 40 ಸಾವಿರ ಲೀಟರ್‌ ಹಾಲು ಬಳಸಲಾಗುತ್ತಿದೆ. ಜತೆಗೆ ಆಂಧ್ರಪ್ರದೇಶದ ವಿಜಯವಾಡಕ್ಕೆ 6 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ.

ರೈತರ ಬೆನ್ನೆಲುಬು: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿದ್ದು, ಕೃಷಿ ನಿರ್ವಹಣೆ ಕಷ್ಟವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ರೈತರು ಕೃಷಿಯ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ಬಹುಪಾಲು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ಅವಳಿ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೈ ಕೊಟ್ಟಿದ್ದು, ಸರ್ಕಾರವು ಎರಡೂ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಿದೆ. ಅನಾವೃಷ್ಟಿಯಿಂದಾಗಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ರಾಸುಗಳನ್ನು ಸಾಕುವುದು ರೈತರಿಗೆ ದೊಡ್ಡ ಸವಾಲಾಗಿದೆ.

ಮೇ ಅಂತ್ಯದವರೆಗೆ: ಸಂಕಷ್ಟದಲ್ಲಿರುವ ಹೈನೋದ್ಯಮಕ್ಕೆ ಬಲ ತುಂಬಲು ಮುಂದಾಗಿರುವ ಕೋಚಿಮುಲ್‌ ಆಡಳಿತ ಮಂಡಳಿಯು ಹಾಲು ಖರೀದಿ ದರ ಹೆಚ್ಚಳದ ನಿರ್ಧಾರ ಕೈಗೊಂಡಿದೆ.

ಪ್ರಸ್ತುತ ಹಾಲು ಖರೀದಿ ದರ ಪ್ರತಿ ಲೀಟರ್‌ಗೆ ₹ 22 ಇದೆ. ದರ ಹೆಚ್ಚಳದ ನಂತರ ಪರಿಷ್ಕೃತ ದರ ಲೀಟರ್‌ಗೆ ₹ 23ಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಪ್ರೋತ್ಸಾಹಧನವಾಗಿ ಸರ್ಕಾರ ಲೀಟರ್‌ಗೆ ಸದ್ಯ ₹ 5 ಕೊಡುತ್ತಿದೆ. ಏ.1ರಿಂದ ಅನ್ವಯವಾಗುವಂತೆ ಪ್ರೋತ್ಸಾಹಧನದಲ್ಲಿ ₹ 1 ಹೆಚ್ಚಳ ಮಾಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಹೊಸ ಖರೀದಿ ದರ 2019ರ ಮೇ ಅಂತ್ಯದವರೆಗೆ ಅನ್ವಯವಾಗುತ್ತದೆ. ಆ ನಂತರ ಪರಿಸ್ಥಿತಿ ಅವಲೋಕಿಸಿ ದರ ಪರಿಷ್ಕರಣೆ ಮಾಡುವ ಬಗ್ಗೆ ಕೋಚಿಮುಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇಳಿಕೆಯಾಗಿತ್ತು: ಒಕ್ಕೂಟವು ಹಿಂದಿನ ವರ್ಷ ಜೂನ್‌ 1ರಂದು ಹಾಲು ಖರೀದಿ ದರದಲ್ಲಿ ₹ 1 ಇಳಿಕೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಹಾಲು ಉತ್ಪಾದಕರು ಖರೀದಿ ದರ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದರು. ಕೋಚಿಮುಲ್‌ ಆಡಳಿತ ಮಂಡಳಿ ಕೊನೆಗೂ ಖರೀದಿ ದರ ಹೆಚ್ಚಿಸಿದ್ದು, ಹಾಲು ಉತ್ಪಾದಕರ ಮೊಗದಲ್ಲಿ ಸಂತಸ ಮೂಡಿದೆ.

**

ಅಂಕಿ ಅಂಶ.....
* ನಿತ್ಯ 9.31 ಲಕ್ಷ ಲೀಟರ್‌ ಹಾಲು ಶೇಖರಣೆ
* ₹ 22 ಹಾಲಿ ಖರೀದಿ ದರ
* ₹ 23 ಪರಿಷ್ಕೃತ ಖರೀದಿ ದರ
* ಲೀಟರ್‌ಗೆ ₹ 1 ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.