ADVERTISEMENT

ಕಾನೂನು ಪ್ರಕಾರ ಗಣಿಗಾರಿಕೆ ನಡೆಸಿ: ಎಚ್ಚರಿಕೆ

ಹಿರೇನಾಗವಲ್ಲಿ ಜಿಲೆಟಿನ್‌ ಸ್ಫೋಟ ದುರಂತ: ಎಚ್ಚೆತ್ತ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 14:56 IST
Last Updated 25 ಫೆಬ್ರುವರಿ 2021, 14:56 IST

ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆ ಹಿರೇನಾಗವಲ್ಲಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಘಟನೆಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಧಿಕಾರಿಗಳು ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ಜತೆ ಸಭೆ ನಡೆಸಿ ಕಾನೂನು ಪ್ರಕಾರ ಗಣಿಗಾರಿಕೆ ನಡೆಸುವಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಕ್ವಾರಿ ಮತ್ತು ಕ್ರಶರ್ ಮಾಲೀಕರ ಜತೆ ಮಹತ್ವದ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು.

ಅಕ್ರಮವಾಗಿ ಕಲ್ಲು ಗಣಿಗಾರಿಕೆ, ಜಿಲೆಟಿನ್ ಮತ್ತು ಸ್ಪೋಟಕ ಸಾಮಗ್ರಿಗಳ ಸಂಗ್ರಹಣೆ, ಜಿಲೆಟಿನ್‌ ಸಾಗಣೆ ಮಾಡದಂತೆ ಕ್ವಾರಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜತೆಗೆ ಕ್ವಾರಿಗಳಲ್ಲಿ ಸುರಕ್ಷತಾ ನಿಯಮ ಪಾಲಿಸದೆ ಬೇಕಾಬಿಟ್ಟಿ ಸ್ಫೋಟ ನಡೆಸದಂತೆ ಎಚ್ಚರಿಕೆ ನೀಡಿದರು.

ADVERTISEMENT

ಕ್ವಾರಿಗಳಲ್ಲಿ ಸ್ಫೋಟ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಡ್ಡಾಯವಾಗಿ ಪರವಾನಗಿ ಪಡೆದವರು ಮಾತ್ರ ಸ್ಫೋಟಕ ಸಾಮಗ್ರಿಗಳನ್ನು ಮಾರಾಟ ಮಾಡಬೇಕು, ಸಾಗಿಸಬೇಕು ಮತ್ತು ಸ್ಫೋಟ ಮಾಡಬೇಕು ಎಂದು ಸೂಚಿಸಿದರು.

‘ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ. ನಿಯಮಬಾಹಿರವಾಗಿ ಜಿಲೆಟಿನ್‌ ದಾಸ್ತಾನು ಮಾಡಿರುವವರ ವಿರುದ್ಧವೂ ದೂರು ದಾಖಲಿಸಿ’ ಎಂದು ಜಿಲ್ಲಾಧಿಕಾರಿಯು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

ಕಾರ್ಯಾಚರಣೆ: ‘ಅಧಿಕಾರಿಗಳು 2 ದಿನಗಳಿಂದ ಜಿಲ್ಲೆಯ ವಿವಿಧೆಡೆ ಗಣಿಗಾರಿಕೆ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಜಿಲೆಟಿನ್‌ ಸಂಗ್ರಹಣೆ ಮತ್ತು ಸಾಗಾಟ ಪತ್ತೆಗೆ ಗಣಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಬೇಕು. ಹಿರೇನಾಗವಲ್ಲಿ ದುರಂತ ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರ ವಹಿಸಬೇಕು’ ಎಂದರು.

‘ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರನ್ನು ಶೀಘ್ರವೇ ಗುರುತಿಸಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಬೇಕು. ಅಕ್ರಮ ಗಣಿಗಾರಿಕೆ ತಕ್ಷಣವೇ ಬಂದ್ ಆಗಬೇಕು. ಆಯಾ ತಾಲ್ಲೂಕಿನ ತಹಶೀಲ್ದಾರ್‌ಗಳು ಸೇರಿದಂತೆ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಧಿಕಾರಿಗಳು ಎಚ್ಚರ ವಹಿಸಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

ಪರಿಶೀಲನೆ: ಜಿಲ್ಲಾಧಿಕಾರಿ ಆದೇಶದಂತೆ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಕೋಲಾರ ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆ ಮಾಡಿತು.

ಕೋಲಾರ ತಾಲ್ಲೂಕಿನ ಕರುಡುಬಂಡೆ ಹೊಸಹಳ್ಳಿ, ನರಸಾಪುರ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಗಣಿ ಪರವಾನಗಿ, ಜಮೀನಿಗೆ ಸಂಬಂಧಿಸಿದ ದಾಖಲಪತ್ರಗಳನ್ನು ಹಾಜರುಪಡಿಸುವಂತೆ ಗಣಿ ಮಾಲೀಕರಿಗೆ ಸೂಚಿಸಿದರು.

‘ರಾಜಕೀಯವಾಗಿ ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅನುಮತಿ ಇಲ್ಲದೆ ಗಣಿಗಾರಿಕೆ ನಡೆಸಬಾರದು. ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ’ ಎಂದು ಸೋಮಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.