ADVERTISEMENT

ಎರಡು ವರ್ಷದ ಬಳಿಕ ಸಚಿವರ ಬದಲಾವಣೆ ಖಚಿತ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಷರತ್ತು ವಿಧಿಸಿರುವುದು ಸತ್ಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 23:44 IST
Last Updated 19 ಆಗಸ್ಟ್ 2023, 23:44 IST
ಎಸ್‌.ಎನ್‌.ನಾರಾಯಣಸ್ವಾಮಿ
ಎಸ್‌.ಎನ್‌.ನಾರಾಯಣಸ್ವಾಮಿ   

ಕೋಲಾರ: ‘ಎರಡು ವರ್ಷಗಳ ಬಳಿಕ ಹೊಸಬರಿಗೆ ಸಚಿವ ಸ್ಥಾನ ಬಿಟ್ಟು ಕೊಡುವ ಬಗ್ಗೆ ಮೊದಲೇ ಮಾತುಕತೆ ಆಗಿದೆ. ಪಕ್ಷಕ್ಕೆ ದುಡಿದ ಉಳಿದವರಿಗೂ ಅವಕಾಶ ಸಿಗಬೇಕಲ್ಲ’ ಎಂದು ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದಾಗಲೂ ನಮಗೆ ಇದೇ ಭರವಸೆ ಸಿಕ್ಕಿದೆ. ಎರಡು ವರ್ಷ ಕಾಯಿರಿ, ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ’ ಎಂದರು.

‘ಎರಡೂವರೆ ವರ್ಷಗಳ ಬಳಿಕ ಹಿರಿಯರು ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂಬ ಸಚಿವ ಕೆ.ಎಚ್.ಮುನಿಯಪ್ಪ ಅವರ ಮಾತು ಸರಿ. ಅದನ್ನು ನಾನು ಒಪ್ಪುತ್ತೇನೆ’ ಎಂದು ಹೇಳಿದರು.

ADVERTISEMENT

‘ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೇವೆ. ಈವರೆಗೆ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಚರ್ಚೆಯ ಹಂತದಲ್ಲಿದೆ. ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.