ADVERTISEMENT

ಇಷ್ಟವಿದ್ರೆ ಕೆಲಸ ಮಾಡಿ, ಇಲ್ಲ ಬೇರೆ ನೋಡಿಕೊಳ್ಳಿ: ಸಚಿವ ನಾಗೇಶ್‌ ಗರಂ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 19:15 IST
Last Updated 31 ಡಿಸೆಂಬರ್ 2021, 19:15 IST
   

ಕೋಲಾರ: ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ಶುಕ್ರವಾರ ಮನವಿ ಸಲ್ಲಿಸಲು ಮುಂದಾದ ಅತಿಥಿ ಉಪನ್ಯಾಸಕರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಗರಂ ಆದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಡಿವಿಜಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರನ್ನು ಮಾರ್ಗ ಮಧ್ಯೆ ಭೇಟಿಯಾದ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು, ‘ನಾವು ಶೋಷಣೆಗೆ ಒಳಗಾಗಿದ್ದೇವೆ. ದಯವಿಟ್ಟು ನಮಗೆ ಸೇವಾ ಭದ್ರತೆ ಕಲ್ಪಿಸಿ, ವೇತನ ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಸದಸ್ಯರು ಶೋಷಣೆ ಪದ ಬಳಸಿದ್ದರಿಂದ ಅಸಮಾಧಾನಗೊಂಡ ಸಚಿವರು, ‘ನಿಮಗೆ ಶೋಷಣೆ ಪದದ ಅರ್ಥ ಗೊತ್ತೇನ್ರಿ, ನಾವು ನಿಮ್ಮ ಮನೆ ಬಾಗಿಲಿಗೆ ಬಂದು ಬಲವಂತವಾಗಿ ಈ ಕೆಲಸ ಮಾಡಿ ಎಂದು ಕೇಳಿದ್ದೇವಾ, ನೀವು ಕೇಳುವುದನ್ನೆಲ್ಲಾ ಮಾಡು
ವುದಕ್ಕೆ ಆಗೋದಿಲ್ಲ. ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲ ಎಂದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬೇರೆ
ದಾರಿ ನೋಡಿಕೊಳ್ಳಿ’ ಎಂದು ಹರಿಹಾಯ್ದರು.

ADVERTISEMENT

‘ಶೋಷಣೆ ಪದದ ಅರ್ಥ ಗೊತ್ತಿರಬೇಕು. ನಿಮ್ಮನ್ನು ಯಾರಾದರೂ ಎಳೆದುಕೊಂಡು ಬಂದು ಕೈಕಾಲು ಕಟ್ಟಿ ಕೆಲಸ ಮಾಡಿಸಿದರೆ ಅದು ಶೋಷಣೆ. ಆದರೆ, ನೀವೇ ಸ್ವತಂತ್ರವಾಗಿ ಆರಿಸಿಕೊಂಡಿರುವ ಕೆಲಸವಿದು.ಪ್ರತಿ ವರ್ಷ ನಿಮಗೆ ಸ್ವಾತಂತ್ರ್ಯವಿತ್ತು. ಬೇಕಾದರೆ ಕೆಲಸಕ್ಕೆ ಸೇರಬಹುದಿತ್ತು, ಇಲ್ಲವೇ ಬಿಡಬಹುದಿತ್ತು. ಯಾರೂ ನಿಮ್ಮನ್ನು ಶೋಷಿಸಿಲ್ಲ. ಪದ ಬಳಕೆ ಮಾಡುವಾಗ ಎಚ್ಚರಿಕೆ ಇರಬೇಕು’ ಎಂದು ಹೇಳಿದ ಸಚಿವರು ಕಾರು ಹತ್ತಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.